ರಾಜಕೀಯ ಪಕ್ಷಗಳಿಂದ ಸಂವಿಧಾನ ವಿರೋಧಿ ನಡೆ

ದಾವಣಗೆರೆ: ಸಂವಿಧಾನಕ್ಕೆ ಸಾವಿಲ್ಲ. ಆದರೆ, ಸವಾಲುಗಳಿವೆ. 70 ವರ್ಷದಿಂದಲೂ ಎಲ್ಲ ರಾಜಕೀಯ ಪಕ್ಷಗಳ ನಡೆ ಸಂವಿಧಾನದ ತಾತ್ವಿಕ ಆಶಯಗಳಿಗೆ ವಿರುದ್ಧವಾಗಿದೆ ಎಂದು ಬಂಡಾಯ ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಉಳಿಸಿ ಹೋರಾಟ ಸಮಿತಿ ದಾವಣಗೆರೆ ವತಿಯಿಂದ ಸಂವಿಧಾನ ಮತ್ತು ಸಮಕಾಲೀನ ಸಂದರ್ಭ ಕುರಿತಂತೆ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಒಕ್ಕೂಟ ವ್ಯವಸ್ಥೆ, ಜಾತ್ಯತೀತತೆ, ಸಮಾಜವಾದ, ಸ್ವಾತಂತ್ರೃ, ಸಮಾನತೆ ಹಾಗೂ ಸಂಸದೀಯ ಪ್ರಜಾಪ್ರಭುತ್ವ ಈ ಎಲ್ಲ ಸಾಂವಿಧಾನಿಕ ಆಶಯಗಳು ಪರಿಪಾಲನೆಯಾಗುತ್ತಿಲ್ಲ. ನಾವಿಂದು ಏಕಮುಖಿಯಾಗಿ ಹೋಗುತ್ತಿದ್ದೇವೆ. ಚುನಾವಣಾ ಪೂರ್ವದಲ್ಲೇ ಮುಂದಿನ ಸಿಎಂ, ಪಿಎಂ ನಿರ್ಧರಿಸುವುದು ಸಂವಿಧಾನ ವಿರೋಧಿಯಾಗಿದೆ ಎಂದರು.

ಒಕ್ಕೂಟ ವ್ಯವಸ್ಥೆಯಡಿ ರಾಜ್ಯಗಳಿಗೆ ಶೈಕ್ಷಣಿಕ ಸ್ವಾಯತ್ತತೆ ಸಿಗುತ್ತಿಲ್ಲ. ಜಿಲ್ಲಾವಾರು ಗ್ರಾಹಕರ ರಕ್ಷಣಾ ಸಂಸ್ಥೆಗೆ ಅಧ್ಯಕ್ಷರನ್ನು ನೇಮಿಸುವ ಅಧಿಕಾರವನ್ನೂ ಕೇಂದ್ರ ಸರ್ಕಾರ ವಶಪಡಿಸಿಕೊಂಡಿದೆ. ನೀಟ್ ಪರೀಕ್ಷೆ ಕೇಂದ್ರೀಕರಿಸಿದ್ದರಿಂದ ಬಡ ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಇದರ ವಿರುದ್ಧ ಯಾವ ರಾಜ್ಯದವರೂ ಧ್ವನಿ ಎತ್ತುತ್ತಿಲ್ಲ ಎಂದು ವಿಷಾದಿಸಿದರು.

ಜಿಎಸ್‌ಟಿ ಹೆಸರಲ್ಲಿ ತೆರಿಗೆ ಸರಳೀಕರಿಸುವ ಬದಲಾಗಿ ತೆರಿಗೆ ಕೇಂದ್ರೀಕರಣವಾಗಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಒಂದು ರಾಷ್ಟ್ರ, ಒಂದು ತೆರಿಗೆ ಎಂಬುದು ಹುಸಿ ಘೋಷಣೆ. ಮುಂದಿನ ದಿನದಲ್ಲಿ ಇದು ಒಂದು ರಾಷ್ಟ್ರ, ಒಂದು ಧರ್ಮ ಎಂದು ಬದಲಾಗಬಹುದು ಎಂದೂ ಆತಂಕ ವ್ಯಕ್ತಪಡಿಸಿದರು.

ಧಾರ್ಮಿಕ ಮೂಲಭೂತವಾದ ಮತ್ತು ಆರ್ಥಿಕ ಮೂಲಭೂತವಾದದ ಸಮಕಾಲೀನ ಸಂದರ್ಭವೇ ತಾತ್ವಿಕವಾಗಿ ಸಂವಿಧಾನದ ವಿರೋಧಿಯಾಗಿವೆ. ಸಂವಿಧಾನವನ್ನು ಬದಲಾಯಿಸುತ್ತೇವೆ ಎನ್ನುವವರು ಅವತಾರಪುರುಷರಲ್ಲ ಎಂದರು.

ದೆಹಲಿಯ ಜಂತರ್‌ಮಂತರ್‌ನಲ್ಲಿ ಸಂವಿಧಾನ ಸುಟ್ಟು ಹಾಕಿ ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿದ್ದು ಸಾಮಾಜಿಕ ಸಾಂಸ್ಕೃತಿಕ ವಿಕೃತಿ. ದೇಶದಲ್ಲಿಂದು ಹಸಿವಿನ ರಾಜಕಾರಣದ ಬದಲಾಗಿ ಹಸುವಿನ ರಾಜಕಾರಣ ಮುನ್ನೆಲೆಗೆ ಬಂದಿದೆ. ಪೊಲೀಸ್ ಅಧಿಕಾರಿ ಸೇರಿ ದಲಿತರ ಮೇಲೆ ಹಲ್ಲೆ ನಡೆಯುತ್ತಿವೆ.

ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹಲ್ಲೆಕೋರ ಭಾಷೆ ಬಳಕೆ ಹಾಗೂ ದುರಹಂಕಾರದ ದೃಷ್ಟಿಕೋನ ಹೆಚ್ಚುತ್ತಿವೆ. ಹತ್ಯೆಗಳೂ ಹೆಚ್ಚುತ್ತಿವೆ. ನಿಜವಾದ ಸಂಶೋಧಕರಿಗೆ ರಜೆ ನೀಡಲಾಗಿದೆ. ಅವರ ಹೆಸರಲ್ಲಿ ರಾಜಕೀಯ ಪಕ್ಷದ ಸಂಶೋಧಕರಿಂದ ದೇವರ ಜಾತಿಯನ್ನು ಹುಡುಕುವ ‘ಬುದ್ಧಿವಂತಿಕೆ’ ಮುಂದುವರಿದಿದೆ. ಸ್ವಾತಂತ್ರೃದ ಅಪವ್ಯಾಖ್ಯಾನ ಹಿಂದಿನಿಂದಲೂ ಬಂದಿದೆ ಎಂದು ವಿವರಿಸಿದರು.

ವಿಚಾರವಾದಿ ಡಾ. ಸಿದ್ಧನಗೌಡ ಪಾಟೀಲ್, ಕಾರ್ಮಿಕ ಮುಖಂಡ ಎಚ್.ಕೆ. ರಾಮಚಂದ್ರಪ್ಪ, ವಕೀಲ ಅನೀಸ್‌ಪಾಷಾ, ಪತ್ರಕರ್ತ ಶಿವಸುಂದರ್, ಇಮ್ತಿಯಾಜ್ ಹುಸೇನ್ ಇದ್ದರು.