More

  ಭಕ್ತಿಯ ಹೊಳೆಯಲ್ಲಿ ಮಿಂದೆದ್ದ ಭಕ್ತರು

  ದಾವಣಗೆರೆ : ಕಣ್ಣು ಹಾಯಿಸಿದ ಕಡೆಗೆಲ್ಲ ದೇವಿಯ ಭಕ್ತರ ದಂಡು. ತಾಯಿಯ ಸ್ಮರಣೆಯಲ್ಲಿ ‘ಉಧೋ..ಉಧೋ…’ ಉದ್ಘಾರ. ದೀಡ್ ನಮಸ್ಕಾರ, ಬೇವಿನುಡುಗೆ, ಉರುಳು ಸೇವೆ.
   ಇವು, ನಗರ ದೇವತೆ ದುರ್ಗಾಂಬಿಕಾ ದೇವಿ ಜಾತ್ರೆಯಲ್ಲಿ ಬುಧವಾರ ಕಂಡುಬಂದ ದೃಶ್ಯಗಳು. ಎರಡು ವರ್ಷಕ್ಕೊಮ್ಮೆ ಆಚರಿಸುವ ಊರಮ್ಮನ ಹಬ್ಬಕ್ಕೆ ಇಡೀ ನಗರ ಭಕ್ತಿಯ ಹೊಳೆಯಲ್ಲಿ ಮಿಂದೆದ್ದಿತು. ದೇವಸ್ಥಾನದ ಆವರಣ ಭಕ್ತರಿಂದ ತುಂಬಿತ್ತು.
   ಪದ್ಧತಿಯಂತೆ ದೇವಿಯ ಮಹಾಪೂಜಾ ಸಮಾರಂಭ ಹಾಗೂ ಬೆಳಗ್ಗೆ ಚರಗ ಚೆಲ್ಲುವುದು ನಡೆಯಿತು. ದುಗ್ಗಮ್ಮನ ದರ್ಶನಕ್ಕಾಗಿ ಭಕ್ತರು ಬೆಳಗ್ಗೆಯಿಂದಲೆ ದೇವಸ್ಥಾನದ ಕಡೆಗೆ ಬರತೊಡಗಿದರು. ಸುಮಂಗಲೆಯರು ಕೈಯಲ್ಲಿ ಆರತಿ ತಟ್ಟೆ ಹಿಡಿದು ಬಂದರು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರು, ನೆಂಟರಿಷ್ಟರು ಜತೆಗೂಡಿ ಕಾಲ್ನಡಿಗೆಯಲ್ಲಿ ದೇಗುಲದ ಕಡೆಗೆ ಆಗಮಿಸಿದರು. ದರ್ಶನದ ಸಾಲು ದೊಡ್ಡದಾಗಿತ್ತು.
   ನೆತ್ತಿ ಸುಡುವ ಬಿಸಿಲಿದ್ದರೂ ಭಕ್ತರ ಸಂಖ್ಯೆ ಕಡಿಮೆಯಾಗಲಿಲ್ಲ. ಅಲ್ಲಲ್ಲಿ ಕುಡಿಯುವ ನೀರು, ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಜಾತ್ರೆಯು ಸುಸೂತ್ರವಾಗಿ ನಡೆಯುವಂತೆ, ಯಾವುದೆ ಅಹಿತಕರ ಘಟನೆಗೆ ಅವಕಾಶವಾಗದಂತೆ ನೋಡಿಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಪೊಲಿಸರನ್ನು ನಿಯೋಜಿಸಲಾಗಿತ್ತು. ದೇವಸ್ಥಾನದ ಎದುರಿನ ಪ್ರಸಾದ ನಿಲಯದ ಬಳಿ ಪೊಲೀಸ್ ಚೌಕಿಯನ್ನು ಮಾಡಲಾಗಿದ್ದು ಅಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದರು.
   ಹೊನ್ನಾಳಿ ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮೇಯರ್ ವಿನಾಯಕ ಪೈಲ್ವಾನ್ ಸೇರಿ ಅನೇಕ ಜನಪ್ರತಿನಿಧಿಗಳು, ಗಣ್ಯರು ದೇವಸ್ಥಾನಕ್ಕೆ ಭೇಟಿ ನೀಡಿದ ದರ್ಶನ ಪಡೆದರು.
   …
   * ಭಕ್ತಿಯ ಪರಾಕಾಷ್ಠೆ
   ದೇವಸ್ಥಾನದ ಆವರಣದಲ್ಲಿ ಭಕ್ತಿಯ ಪರಾಕಾಷ್ಠೆ ಕಂಡುಬಂದಿತು. ದೇವಿಯ ಕೃಪೆಗೆ ಪಾತ್ರರಾಗಲು ಹೊತ್ತಿದ್ದ ಹರಕೆಯನ್ನು ಭಕ್ತರು ವಿವಿಧ ರೂಪಗಳಲ್ಲಿ ತೀರಿಸಿದರು. ದೇಗುಲದ ಸುತ್ತಲೂ ಹಾಕಿದ್ದ ಮರಳು ಹಾಸಿನ ಮೇಲೆ ಒದ್ದೆ ಬಟ್ಟೆಯಲ್ಲಿ ಉರುಳು ಸೇವೆ ಸಲ್ಲಿಸಿ ದೇವಿಯನ್ನು ಪ್ರಾರ್ಥಿಸಿದರು. ಕುಟುಂಬದ ಸದಸ್ಯರು ಅವರಿಗೆ ನೆರವಾದರು. ಮತ್ತೆ ಕೆಲವರು ದೀಡ್ ನಮಸ್ಕಾರ ಹಾಕುವ ದೃಶ್ಯ ಕಂಡುಬಂದಿತು.
   ಬೇವಿನುಡುಗೆ ಸೇವೆಯೂ ಸಾಮಾನ್ಯವಾಗಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಈ ಸಂಪ್ರದಾಯ ಪಾಲಿಸಿದರು. ಪುಟ್ಟ ಮಕ್ಕಳಿಗೂ ಬೇವಿನುಡುಗೆ ತೊಡಿಸಲಾಗಿತ್ತು. ಜಾತ್ರೆಯಲ್ಲಿ ಮೌಢ್ಯವನ್ನು ಪಾಲಿಸದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಜಾಗೃತಿ ಮೂಡಿಸಿದರು. ಬ್ಯಾನರ್ ಅಳವಡಿಸಿ, ಕರಪತ್ರ ಹಂಚಲಾಯಿತು.
   ದೇಗುಲದ ಒಳಗೆ ದೇವಿಯ ದರ್ಶನ ಪಡೆದವರಲ್ಲಿ ಧನ್ಯತಾ ಭಾವ. ತಾಯಿಗೆ ಹಣ್ಣು, ಕಾಯಿ, ಬಳೆ ಅರ್ಪಿಸುವ ಜತೆಗೆ ಸೀರೆ, ಉಡಿಯಕ್ಕಿ, ಬೇಳೆ, ಬೆಲ್ಲ, ಅಡಕೆ-ಎಲೆ, ಅರಿಷಿಣ-ಕುಂಕುಮ, ಉತ್ತತ್ತಿ ಮುಂತಾದ ವಸ್ತುಗಳನ್ನು ನೀಡಿದರು.
   …
   * ಬಾಡೂಟ ಸವಿದ ಭಕ್ತರು
   ಜಾತ್ರೆಯ ಅಂಗವಾಗಿ ಭಕ್ತರು ತಮ್ಮ ಮನೆಗಳಲ್ಲಿ ಕುರಿ, ಕೋಳಿಗಳನ್ನು ಬಲಿ ಕೊಟ್ಟು ಬಾಡೂಟ ಸವಿದರು. ಇದಕ್ಕೂ ಮೊದಲು ಕುರಿಗಳನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿಸಿ ಕರೆದುಕೊಂಡು ಹೋಗಲಾಯಿತು.
   ಹಳೇ ನಗರದ ಗಲ್ಲಿ ಗಲ್ಲಿಗಳಲ್ಲಿ ಪೆಂಡಾಲ್‌ಗಳನ್ನು ಹಾಕಲಾಗಿತ್ತು. ಮನೆಯ ಮುಂಭಾಗದಲ್ಲೇ ಕುರಿಗಳನ್ನು ಬಲಿ ಕೊಟ್ಟಿದ್ದರಿಂದ ರಸ್ತೆಯ ಮೇಲೆ ರಕ್ತ ಹರಿಯಿತು. ಭಕ್ತರು ನೆಂಟರಿಷ್ಟರೊಂದಿಗೆ ಬಾಡೂಟ ಸವಿದು ಹಬ್ಬವನ್ನು ಸಂಭ್ರಮಿಸಿದರು.
   …

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts