ದವಸ ಧಾನ್ಯ, ಧನ ಸಂಗ್ರಹಕ್ಕೆ ಚಾಲನೆ

ದಾವಣಗೆರೆ: ನಗರದ ಶಿವಯೋಗಾಶ್ರಮದಲ್ಲಿ ಜ.18-20ರವರೆಗೆ ಮೂರುದಿನ ನಡೆಯಲಿರುವ ಲಿಂ.ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಅವರ 62ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ ಅಂಗವಾಗಿ ದವಸ-ಧಾನ್ಯ, ಧನ ಸಂಗ್ರಹಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಶಿವಯೋಗಾಶ್ರಮದಲ್ಲಿ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಚಾಲನೆ ನೀಡಿ ವಿಶ್ವಗುರು ಬಸವಣ್ಣನವರು ನೀಡಿದ ಕಾಯಕ ಮತ್ತು ದಾಸೋಹ ತತ್ವಗಳನ್ನು ಜಯ ದೇವ ಜಗದ್ಗುರುಗಳು 20ನೇ ಶತಮಾನದಲ್ಲಿ ಅನುಷ್ಠಾನಕ್ಕೆ ತಂದರು ಎಂದರು.

ಬಡ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಉಚಿತ ವಿದ್ಯಾರ್ಥಿ ನಿಲಯಗಳನ್ನು ಪ್ರಥಮವಾಗಿ ಸ್ಥಾಪಿಸುವ ಮೂಲಕ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿ ಮಾಡಿದರು ಎಂದು ಸ್ಮರಿಸಿದರು.

ಜಗದ್ಗುರುಗಳು ಲಿಂಗೈಕ್ಯರಾಗಿ 62 ವರ್ಷಗಳು ಪೂರೈಸಿವೆ. ಅವರು ಧಾರ್ಮಿಕ ಹಾಗೂ ರಾಷ್ಟ್ರ ಕಲ್ಯಾಣಕ್ಕಾಗಿ ಮಾಡಿರುವ ಅಗಣಿತ ಮಹಾ ಕಾರ್ಯಗಳ ಸ್ಮರಣೆ ನಮ್ಮೆಲ್ಲರ ಕರ್ತವ್ಯವಾಗಿದೆ.

ಜ. 18, 19, ಹಾಗೂ 20ರಂದು ಅವರ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ, ಸಹಜ ಶಿವಯೋಗವು ಚಿತ್ರದುರ್ಗದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ ನಡೆಯಲಿವೆ ಎಂದರು.

ಭಕ್ತರ ಸಹಕಾರ ಅಗತ್ಯವಾಗಿದೆ. ಸ್ಮರಣೋತ್ಸವಕ್ಕೆ ಉದಾರವಾಗಿ ದವಸ, ಧಾನ್ಯ, ಧನ ನೀಡಿ ಪಾಲ್ಗೊಳ್ಳುವ ಮೂಲಕ ಭಕ್ತಿ ಸಮರ್ಪಿಸಬೇಕು ಎಂದರು.

ಮಠದ ಸಮಿತಿಯವರಾದ ಕುಂಟೋಜಿ ಚನ್ನಪ್ಪ, ಲಂಬಿ ಮುರುಗೇಶಪ್ಪ, ಶರಣಬಸವ, ಚಂದ್ರಶೇಖರಯ್ಯ, ಸರ್ಪಭೂಷಣ, ಸುಭಾಷ ಬಣಗಾರ್, ಕೀರ್ತಿಕುಮಾರ್, ನಾಗರಾಜ್, ಉಮಾಪತಿ, ಸಂಗಮೇಶ್, ನೂರುಲ್ಲಾ ಇದ್ದರು.