ಓರಿಯೆಂಟಲ್ ಇನ್‌ಶುರೆನ್ಸ್ ಕಂಪನಿ ದಾವಣಗೆರೆಯಲ್ಲೇ ಮರುಸ್ಥಾಪನೆ ಆಗಲಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಮನವಿ ವಿಜಯವಾಣಿ ಸುದ್ದಿಜಾಲ ದಾವಣಗೆರೆ ಓರಿಯೆಂಟಲ್ ಇನ್‌ಶುರೆನ್ಸ್ ಕಂಪನಿ ಲಿಮಿಟೆಡ್ ವಿಭಾಗೀಯ ಕಚೇರಿಯನ್ನು ದಾವಣಗೆರೆಯಲ್ಲಿಯೇ ಮರುಸ್ಥಾಪನೆ ಮಾಡಿ ಮುಂದುವರಿಸುವಂತೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಒತ್ತಾಯಿಸಿದ್ದಾರೆ. ಓರಿಯೆಂಟಲ್ ಇನ್‌ಶುರೆನ್ಸ್ ಕಂಪನಿಯನ್ನು ದಾವಣಗೆರೆಯಲ್ಲಿ ರದ್ದುಗೊಳಿಸಿ, ಚಿತ್ರದುರ್ಗ ಶಾಖೆಯ ಕಚೇರಿಯೊಂದಿಗೆ ವಿಲೀನಗೊಳಿಸುವ ಬಗ್ಗೆ ದಾವಣಗೆರೆಯ ಏಜೆಂಟರುಗಳು ತಮ್ಮನ್ನು ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ, ಪ್ರಭಾ ಮಲ್ಲಿಕಾರ್ಜುನ್ ಗುರುವಾರ ನಿಯೋಗದೊಂದಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿದರು. ದಾವಣಗೆರೆ ವಿಭಾಗೀಯ ಕಚೇರಿಗೆ ಹೋಲಿಸಿದರೆ ಚಿತ್ರದುರ್ಗ ಶಾಖಾ ಕಚೇರಿಯಲ್ಲಿ ಏಜೆಂಟರ ಸಂಖ್ಯೆ ತೀರಾ ಕಡಿಮೆಯಿದೆ ಹಾಗೂ 2022-23ನೇ ಸಾಲಿನಲ್ಲಿ ಚಿತ್ರದುರ್ಗ ಶಾಖೆಯ ಕಚೇರಿಯು 2.92 ಕೋಟಿ ರೂ. ವ್ಯವಹಾರವನ್ನು ಹೊಂದಿದೆ. 4.55 ಕೋಟಿಯ ಕ್ಲೇಮ್‌ನೊಂದಿಗೆ 1.93 ಕೋಟಿ ನಿವ್ವಳ ನಷ್ಟವಾಗಿದೆ. ದಾವಣಗೆರೆ ವಿಭಾಗೀಯ ಕಚೇರಿಯು 3.30 ಕೋಟಿ ರೂ. ವ್ಯವಹಾರವನ್ನು ಹೊಂದಿದ್ದು, 2.92 ಕೋಟಿ ಕ್ಲೈಮ್‌ನೊಂದಿಗೆ ಅಲ್ಪ ಲಾಭದಲ್ಲಿದೆ ಎಂದು ವಿವರಿಸಿದರು. ಈ ನಿಟ್ಟಿನಲ್ಲಿ 2024 ರ ಜುಲೈ 6 ರಂದು ಒಐಸಿ ಪ್ರಾದೇಶಿಕ ಕಚೇರಿಯಿಂದ ಹೊರಡಿಸಲಾದ ಆದೇಶವನ್ನು ರದ್ದುಪಡಿಸಲು ಮತ್ತು ದಾವಣಗೆರೆ ವಿಭಾಗೀಯ ಕಚೇರಿಯನ್ನು ದಾವಣಗೆರೆಯಲ್ಲಿಯೇ ಮರುಸ್ಥಾಪಿಸುವಂತೆ ಮನವಿ ಮಾಡಿದರು. ಪಕ್ಕದ ಎರಡು ಜಿಲ್ಲಾ ಕಚೇರಿಗಳ ವಿಲೀನಕ್ಕೆ ಅತಿ ಅವಶ್ಯವಿದ್ದಲ್ಲಿ ಚಿತ್ರದುರ್ಗ ಶಾಖಾ ಕಚೇರಿಯನ್ನು ದಾವಣಗೆರೆ ವಿಭಾಗೀಯ ಕಚೇರಿಯೊಂದಿಗೆ ವಿಲೀನಗೊಳಿಸಿ ದಾವಣಗೆರೆಯಲ್ಲಿ ಮಾತ್ರ ಒಂದೇ ಕಚೇರಿಯನ್ನು ಸ್ಥಾಪಿಸಲು ಸೂಚನೆ ನೀಡಬೇಕು. ಸಮಸ್ಯೆಗೆ ಆದ್ಯತೆ ನೀಡಲು ಮತ್ತು ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅಗತ್ಯವಿರುವ ಹೆಚ್ಚಿನ ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.

