More

    ನಿರ್ಧಾರ ಅಚಲ, ಶುಕ್ರವಾರ ನಾಮಪತ್ರ ಸಲ್ಲಿಕೆ

    ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರ ಅಚಲವಾಗಿದ್ದು ಶುಕ್ರವಾರ ಮೊದಲ ನಾಮಪತ್ರ ಸಲ್ಲಿಸುವುದಾಗಿ ಕಾಂಗ್ರೆಸ್ ಮುಖಂಡ, ಇನ್‌ಸೈಟ್ಸ್ ಐಎಎಸ್ ತರಬೇತಿ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ ಕುಮಾರ್ ಹೇಳಿದರು.
     ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ. 18ರಂದು ಬೆಂಬಲಿಗರೊಂದಿಗೆ ತೆರಳಿ ಮತ್ತೊಮ್ಮೆ ಉಮೇದುವಾರಿಕೆ ಸಲ್ಲಿಸುವುದಾಗಿಯೂ, ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.
     ದಾವಣಗೆರೆಯಲ್ಲಿ 2 ಕುಟುಂಬಗಳು ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಳೆಸಿವೆ. ಇದರಲ್ಲಿ ಜನಸೇವೆ ಗೌಣವಾಗಿದ್ದು ವ್ಯಾಪಾರವೇ ಮೊದಲ ಆದ್ಯತೆಯಾಗಿದೆ. ಜನರಿಗೆ ನಿಜವಾದ ಅಭಿವೃದ್ಧಿ ತಲುಪಿಲ್ಲ, ಗ್ರಾಮೀಣ ಪ್ರದೇಶಗಳು ಬಹಳಷ್ಟು ಹಿಂದುಳಿದಿವೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಉದ್ಯೋಗವಕಾಶಗಳ ಕೊರತೆಯಿದೆ ಎಂದರು.
     ಪ್ರಾದೇಶಿಕ ಅಸಮಾನತೆ ದೂರ ಮಾಡಲು ಆಸ್ತಿ, ಅಧಿಕಾರ, ಅವಕಾಶಗಳ ವಿಕೇಂದ್ರೀಕರಣ ಆಗಬೇಕು. ಮರಳು, ನೀರು, ಶಿಕ್ಷಣ ಸೌಲಭ್ಯಗಳು ಒಂದೆಡೆ ಕೇಂದ್ರೀಕೃತವಾಗಬಾರದು ಎಂದು ಅಭಿಪ್ರಾಯಪಟ್ಟರು.
     ಕ್ಷೇತ್ರದಲ್ಲಿ ಚುನಾವಣೆ ನಡೆದಾಗ ಆ ಎರಡು ಕುಟುಂಬದವರೇ ಟಿಕೆಟ್ ತರುತ್ತಾರೆ. ಅವರನ್ನು ಯಾರೂ ಎದುರು ಹಾಕಿಕೊಳ್ಳುವುದಿಲ್ಲ. ಇಂಥ ವ್ಯವಸ್ಥೆಯಲ್ಲಿ ನಮ್ಮಂಥವರಿಗೆ ಅವಕಾಶ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
     ಕಳೆದ ಒಂದು ವರ್ಷದಿಂದ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. 800 ಹಳ್ಳಿಗಳನ್ನು ಸುತ್ತಿರುವೆ. ಸರ್ವೇನಲ್ಲೂ ನನ್ನ ಹೆಸರೇ ಮುಂಚೂಣಿಯಲ್ಲಿತ್ತು. ಆದರೂ ಅವಕಾಶ ಕೈತಪ್ಪಿತು. ಚನ್ನಯ್ಯ ಒಡೆಯರ್ ಅವರಿಗೆ ಆದಂತೆ ನನಗೂ ಅನ್ಯಾಯವಾಗಿದೆ ಎಂದು ಹೇಳಿದರು.
     ಯಾವುದೇ ಪಕ್ಷ ಅಥವಾ ವ್ಯಕ್ತಿಗಳ ವಿರುದ್ಧ ನಾನು ಬಂಡಾಯ ಎದ್ದಿಲ್ಲ. ಗುರುಗಳ ಮೇಲೆ ಭಕ್ತಿ, ಗೌರವ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನಗೆ ಮಾದರಿಯಾಗಿದ್ದಾರೆ. ಜನರ ಅಪೇಕ್ಷೆಯಂತೆ ನಾನು ಪಕ್ಷೇತರನಾಗಿ ಸ್ಪರ್ಧೆ ಮಾಡಲಿದ್ದೇನೆ ಎಂದು ತಿಳಿಸಿದರು.
     ಹೊಸ ರಾಜಕಾರಣದ ಆಶಯ ನನ್ನದು. ಇಷ್ಟು ವರ್ಷ ಜನರಿಗೆ ಬೇರೆ ಆಯ್ಕೆ ಇರಲಿಲ್ಲ, ಈಗ ಆ ಕಾಲ ಬಂದಿದೆ. ಜನಕೇಂದ್ರಿತ ರಾಜಕಾರಣ ನನ್ನ ಆದ್ಯತೆ ಎಂದರು.
     ದಾವಣಗೆರೆ ಕ್ಷೇತ್ರದ ಜನರಲ್ಲಿ ಅಸಮಾಧಾನ, ಕೋಪ ಬೂದಿ ಮುಚ್ಚಿದ ಕೆಂಡದಂತಿದೆ. ಚುನಾವಣೆಯಲ್ಲಿ ಮತದಾರರು ಅಚ್ಚರಿಯ ಫಲಿತಾಂಶ ನೀಡಲಿದ್ದಾರೆ ಎಂದು ಹೇಳಿದರು.

    See also  ಗುಣಮುಖರಾದ 7 ಮಂದಿ ಆಸ್ಪತ್ರೆಯಿಂದ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts