ದಾವಣಗೆರೆ : ಬೇಸಿಗೆಯಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ವಿಧಾನಗಳನ್ನು (ಎಸ್‌ಒಪಿ) ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದಲ್ಲಿ ಬುಧವಾರ, ಜಿಲ್ಲಾ ಮಟ್ಟದ ಪರಿಸರ ಆರೋಗ್ಯ ಸಮಿತಿಯ ಸಭೆಯಲ್ಲಿ ಮಾತನಾಡಿ, ಬೇಸಿಗೆಯ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ತಿಳಿಸಿದರು. ಶಾಲೆಗಳಲ್ಲಿ ಪ್ರಾರ್ಥನೆ ಇನ್ನಿತರ ಸಂದರ್ಭಗಳಲ್ಲಿ ಮಕ್ಕಳನ್ನು ಬಿಸಿಲಲ್ಲಿ ಹೆಚ್ಚು ಹೊತ್ತು ನಿಲ್ಲಿಸಬಾರದು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ನೀರಿನಿಂದ ಬರುವ ರೋಗಗಳ ಬಗ್ಗೆ ಎಚ್ಚರದಿಂದ ಇರಬೇಕು. ಶುದ್ಧ ಕುಡಿಯುವ ನೀರನ್ನು ಉಪಯೋಗಿಸಬೇಕು. ಹಬ್ಬ, ಜಾತ್ರೆ ಸಂದರ್ಭಗಳಲ್ಲಿ ವಾಂತಿ, ಭೇದಿ ಇನ್ನಿತರ ಸಾಂಕ್ರಾಮಿಕ ಕಾಯಿಲೆಗಳು ಬರದಂತೆ ತಡೆಯಬೇಕು ಎಂದು ತಿಳಿಸಿದರು. ಕೆಲವು ಸಂದರ್ಭಗಳಲ್ಲಿ ಕಿಡಿಗೇಡಿಗಳು ಅಲ್ಲಲ್ಲಿ ಬೆಂಕಿ ಹಚ್ಚುವ ಪ್ರಕರಣಗಳಿರುತ್ತವೆ. ವಿಶೇಷವಾಗಿ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಕಾಣಿಸಿಕೊಂಡರೆ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿದರು. ಘನ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಪ್ರಕರಣಗಳು ಜಗಳೂರಿನಲ್ಲಿ ನಡೆದಿರುವುದು ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ನಿಯಮಗಳನ್ನು ಪಾಲಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಿಸಿದವರಿಗೆ ನಿರ್ದೇಶನ ನೀಡಬೇಕು ಎಂದರು. ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಮಲೇರಿಯಾ ನಿರ್ಮೂಲನಾ ಅಧಿಕಾರಿ ಡಾ.ಕೆ.ಎಚ್. ಗಂಗಾಧರ್, ಡಾ. ಮುರಳೀಧರ್ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಡಾ.ರಾಘವನ್, ಶ್ರೀನಿವಾಸ್ ಚಿಂತಾಲ್ ಇದ್ದರು. … * ಬದಲಾವಣೆ ನಮ್ಮಿಂದ ಆರಂಭವಾಗಲಿ ಇತ್ತೀಚೆಗೆ ಹವಾಮಾನದಲ್ಲಿ ಏರುಪೇರು ಆಗುತ್ತಿದೆ. ಪರಿಸರವನ್ನು ಕಾಪಾಡುವುದು ಎಲ್ಲರ ಕರ್ತವ್ಯವವಾಗಿದೆ. ಬದಲಾವಣೆ ನಮ್ಮ ಮನೆಯಿಂದಲೇ ಆಗಬೇಕು ಎಂದು ಡಿಸಿ ಗಂಗಾಧರ ಸ್ವಾಮಿ ಹೇಳಿದರು. ಮಳೆನೀರು ಕೊಯ್ಲು, ಸೌರವಿದ್ಯುತ್ ಅಳವಡಿಸುವುದು, ನೀರಿನ ಸೋರಿಕೆ ತಡೆಯುವುದು ಸೇರಿದಂತೆ ಸಣ್ಣ ಸಣ್ಣ ಬದಲಾವಣೆ ಮಾಡಿಕೊಳ್ಳಬೇಕು. ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು, ಕಸದ ವಿಲೇವಾರಿ ಸರಿಯಾಗಿ ಆಗಬೇಕು ಎಂದು ತಿಳಿಸಿದರು. ಜಿಲ್ಲಾಡಳಿತ ಭವನದಲ್ಲಿ ಸಂಪೂರ್ಣವಾಗಿ ಸೌರವಿದ್ಯುತ್ ಆಧಾರಿತ ವ್ಯವಸ್ಥೆ ಇದೆ. ಆಫೀಸರ್ಸ್ ಕ್ಲಬ್ನಲ್ಲೂ ಈ ವ್ಯವಸ್ಥೆ ತರಲಾಗುತ್ತಿದೆ. ಪ್ಲಾಸ್ಟಿಕ್ ಬಾಟಲಿಗಳ ಉಪಯೋಗವನ್ನು ನಮ್ಮ ಕಚೇರಿಯಲ್ಲಿ ಮಾಡುತ್ತಿಲ್ಲ. ಅಧಿಕಾರಿಗಳು ನಿಮ್ಮ ಕಚೇರಿ, ಮನೆಗಳಲ್ಲಿ ಇಂಥ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. … * ಸೈಕಲ್ ಬಳಸಿ ಅಧಿಕಾರಿಗಳು ಸೈಕಲ್ ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕು. ಹತ್ತಿರದ ಜಾಗಗಳಿಗೆ ವಾಹನ ತೆಗೆದುಕೊಂಡು ಹೋಗುವುದನ್ನು ಬಿಡಬೇಕು. ಸೈಕಲ್ ಉಪಯೋಗಿಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ. ನಾನೂ ಕೂಡ ಸೈಕಲ್ ಬಳಸುತ್ತೇನೆ ಎಂದು ತಿಳಿಸಿದರು. ಎಲ್ಲ ಅಧಿಕಾರಿಗಳೂ ವಾರಕ್ಕೊಮ್ಮೆ ಸೈಕಲ್ನಲ್ಲಿ ಕಚೇರಿಗೆ ಬರುವ ಬಗ್ಗೆ ಚಿಂತನೆ ಮಾಡೋಣ. ಪರಿಸರ ಸಂರಕ್ಷಣೆಗೆ ನಮ್ಮ ಕೈಲಾದಷ್ಟು ಕೊಡುಗೆ ನೀಡೋಣ. ಇದರಿಂದ ನಮ್ಮ ಗೌರವ ಜಾಸ್ತಿಯಾಗುತ್ತದೆ ಎಂದು ಪ್ರೇರಣೆ ನೀಡಿದರು. ಜಿಲ್ಲೆಯಲ್ಲಿ ವರ್ಷದಲ್ಲಿ 1 ಕೋಟಿ ಗಿಡ ನೆಡುವ ಸಂಕಲ್ಪವಿದೆ. ಇದನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಒಂದು ವಾರದಲ್ಲಿ ಸಭೆ ಮಾಡೋಣ ಎಂದು ತಿಳಿಸಿದರು. … (ಕೋಟ್) ಎಚ್‌ಐವಿ ಸೋಂಕಿತರಿಗೆ ಉಚಿತವಾಗಿ ಎ.ಆರ್.ಟಿ. ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಈ ಸೋಂಕಿನಿಂದ ಮರಣ ಪ್ರಮಾಣ ಕಡಿಮೆ ಆಗಿದೆ. ಮೂರ್ನಾಲ್ಕು ವರ್ಷದಿಂದ ತಾಯಿಯಿಂದ ಮಗುವಿಗೆ ಸೊಂಕು ಬಂದಿಲ್ಲ. ಸೋಂಕು ನಿರ್ಮೂಲನೆಯ ಜಾಗೃತಿಗೆ ಎಲ್ಲ ಇಲಾಖೆಗಳು ಕೈಜೋಡಿಸಬೇಕು. ಡಾ. ಕೃತಿ, ಎ.ಆರ್.ಟಿ. ವೈದ್ಯಾಧಿಕಾರಿ
