ದಾವಣಗೆರೆ 2ನೇ ರಾಜಧಾನಿಗೆ ಒತ್ತಡ

ದಾವಣಗೆರೆ: ನಾಡಿನ ಮಧ್ಯ ಭಾಗದಲ್ಲಿರುವ ದಾವಣಗೆರೆ ಮತ್ತು ಹರಿಹರ ಅವಳಿ ನಗರಗಳನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಮಾಡಬೇಕೆಂದು ರಾಜಧಾನಿ ಹೋರಾಟ ಸಮಿತಿಯ ಪದಾಧಿಕಾರಿಗಳು ನಿರ್ಣಯ ಕೈಗೊಂಡರು.

ನಗರದ ಚನ್ನಗಿರಿ ವಿರೂಪಾಕ್ಷಪ್ಪ ಕಲ್ಯಾಣ ಮಂಟಪದಲ್ಲಿ ನಡೆದ 2ನೇ ರಾಜಧಾನಿ ರಾಜ್ಯ ಸಮ್ಮೇಳನದಲ್ಲಿ ಚರ್ಚೆ ನಡೆದು ಈ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲು ನಿರ್ಧರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಮಾತನಾಡಿ, 1953ನೇ ಸಾಲಿನಿಂದಲೂ ದಾವಣಗೆರೆ ಎರಡನೇ ರಾಜಧಾನಿಯಾಗಬೇಕೆಂಬ ಕೂಗು ಕೇಳಿಬರುತ್ತಿದೆ. ರಾಜ್ಯ ನಾಯಕರು ಈ ಬಗ್ಗೆ ಒಲವು ಹೊಂದಿದ್ದರು. ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆ 2ನೇ ರಾಜಧಾನಿ ಆಗಲು ಎಲ್ಲ ಮೂಲಸೌಲಭ್ಯ ಹೊಂದಿದೆ. ಇದರಿಂದ ರಾಜ್ಯದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಮಯ ಮತ್ತು ಹಣ ಉಳಿತಾಯವಾಗಲಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.’

ಸಮಾವೇಶವನ್ನು ಕಳಸಪ್ಪಳ ಗೌಡರ ಚನ್ನಬಸಪ್ಪ ಉದ್ಘಾಟಿಸಿದರು. ಮುಖಂಡರಾದ ಎಂ.ಪ್ರೇಮಲತಾ, ಮಹಾದೇವಪ್ಪ ಬಿ.ತಳವಾರ, ರಕ್ತದಾನಿ ಕೃಷ್ಣ, ಪ್ರಸಾದ್, ಗೌಡರ ಬಸವರಾಜಪ್ಪ, ಭಾನುವಳ್ಳಿ ಎಚ್.ಡಿ.ಬಸವನಗೌಡ, ಭಾನುವಳ್ಳಿ ಬಿ.ಮಹೇಶ್ವರಪ್ಪ, ಭೀಮಸಮುದ್ರದ ವರ್ತಕ ಟಿ.ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.