ರಕ್ತ ಕೊಟ್ಟು ಹಳೇ ಪಿಂಚಣಿ ಪದ್ಧತಿಗೆ ಪಟ್ಟು

ದಾವಣಗೆರೆ: ಸರ್ಕಾರಿ ನೌಕರರಿಗೆ ಜಾರಿಗೊಳಿಸಿರುವ ನೂತನ ಪಿಂಚಣಿ (ಎನ್‌ಪಿಎಸ್) ಯೋಜನೆ ರದ್ದುಪಡಿಸಿ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಸರ್ಕಾರಿ ನೌಕರರು ಬುಧವಾರ ರಕ್ತ ಕೊಟ್ಟೇವು, ಪಿಂಚಣಿ ಬಿಡೆವು ಹೋರಾಟ ನಡೆಸಿದರು.

ನಗರದ ಹೈಸ್ಕೂಲ್ ಮೈದಾನದಲ್ಲಿ ಜಮಾಯಿಸಿದ್ದ ನೂರಾರು ಸರ್ಕಾರಿ ನೌಕರರು ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಎನ್‌ಪಿಎಸ್ ಜಾಗೃತಿ ಮೆರವಣಿಗೆಗೆ ಮಯಕೊಂಡ ಶಾಸಕ ಪ್ರೊ.ಲಿಂಗಣ್ಣ ಚಾಲನೆ ಕೊಟ್ಟರು.

ನೌಕರರ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಗಾಗಿ ರೂಪಿಸಿದ್ದ ನಿಶ್ಚಿತ ಪಿಂಚಣಿಯನ್ನು ಕೇಂದ್ರ ಸರ್ಕಾರ 2004 ರಲ್ಲಿ ರದ್ದುಪಡಿಸಿತ್ತು. ರಾಜ್ಯ ಸರ್ಕಾರ 2006ರಲ್ಲಿ ರದ್ದುಪಡಿಸಿ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡಿದೆ. ಸರ್ಕಾರ ಪ್ರಸ್ತುತ ಜಾರಿಗೊಳಿಸಿರುವ ಎನ್‌ಪಿಎಸ್ ಯೋಜನೆ ಪ್ರಪಂಚದ ಅನೇಕ ದೇಶಗಳಲ್ಲಿ ವಿಫಲವಾಗಿದೆ. ಫ್ರಾನ್ಸ್, ಸ್ಪೇನ್, ಗ್ರೀಸ್, ಡೆನ್ಮಾರ್ಕ್ ಇನ್ನಿತರ ದೇಶಗಳಲ್ಲಿ ಈ ಯೋಜನೆಯಡಿ ಷೇರು ಮಾರುಕಟ್ಟೆಯಲ್ಲಿ ಹೂಡಿರುವ ಹಣ ಸಂಪೂರ್ಣ ನಷ್ಟವಾಗಿರುತ್ತದೆ ಎಂದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಎನ್‌ಪಿಎಸ್ ನೌಕರರು ಮರಣ ಹೊಂದಿದರೆ ಆರ್ಥಿಕ ಭದ್ರತೆ ನೀಡುವ ಯಾವ ಅಂಶವನ್ನು ಈ ಯೋಜನೆ ಒಳಗೊಂಡಿಲ್ಲ. ಸರ್ಕಾರ ತಮಗೆ ಅನ್ಯಾಯ ಮಾಡುತ್ತಿದೆ. ಈ ಕೂಡಲೇ ಎನ್‌ಪಿಎಸ್ ಯೋಜನೆ ಹಿಂಪಡೆದು ಹಳೇ ಪದ್ಧತಿಯ ಪಿಂಚಣಿ ಮುಂದುವರಿಸಬೇಕೆಂದು ಒತ್ತಾಯಿಸಿದರು.

ಈ ವೇಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸರ್ಕಾರಿ ನೌಕರರು ರಕ್ತದಾನ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದರು. ರಾಜ್ಯ ಸರ್ಕಾರಿ ನೌಕರರ ಸಂಘ, ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಸಂಘ, ನೌಕರರ ಒಕ್ಕೂಟ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪಧವೀಧರರ ಸಂಘ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.