ದಾವಣಗೆರೆಯಲ್ಲಿ ಜನೌಷಧ ಕಿರುನಾಟಕ ಪ್ರದರ್ಶನ; ಬಿಸಿಎ ವಿದ್ಯಾರ್ಥಿಗಳಿಂದ ಸಾಮಾಜಿಕ ಅರಿವು

ದಾವಣಗೆರೆ: ದಾವಣಗೆರೆಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಮಂಗಳವಾರ, ದವನ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕಾಲೇಜಿನ ಬಿಸಿಎ ಪ್ರಥಮ ವರ್ಷದ ವಿದ್ಯಾರ್ಥಿಗಳು ಜನರಿಕ್ ಔಷಧಗಳ ಕುರಿತು ಕಿರುನಾಟಕ ಪ್ರದರ್ಶಿಸಿದರು.

ಕಾಲೇಜಿನ 10 ವಿದ್ಯಾರ್ಥಿಗಳು ‘ಜನ್ ಔಷಧ್’ ಎಂಬ ಕಿರುನಾಟಕವನ್ನು ಪರಿಣಾಮಕಾರಿಯಾಗಿ ಅಭಿನಯಿಸಿದರು. ಔಷಧಗಳ ಬೆಲೆಗಳು ಏರಿಕೆಯಾಗಿರುವ ಇಂದಿನ ದಿನಗಳಲ್ಲಿ ಜನರಿಕ್ ಔಷಧಗಳು ಬಡ ರೋಗಿಗಳಿಗೆ ಆರ್ಥಿಕವಾಗಿ ಹೇಗೆ ಸಹಾಯಕವಾಗಿವೆ ಎಂಬುದನ್ನು ವಿದ್ಯಾರ್ಥಿಗಳು ಅಭಿನಯದ ಮೂಲಕ ತಿಳಿಸಿಕೊಟ್ಟರು.

ಮಾರುಕಟ್ಟೆಯಲ್ಲಿ ಸಾವಿರಾರು ರೂ. ಬೆಲೆ ಬಾಳುವ ಔಷಧಿಗಳು ಜನೌಷಧ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ದೊರೆಯುತ್ತವೆ ಎನ್ನುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಂದ ಬಂದಿದ್ದ ಪ್ರಯಾಣಿಕರು ಈ ಕಿರುನಾಟಕವನ್ನು ವೀಕ್ಷಿಸಿದರು.