ದಾವಣಗೆರೆ : ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರಿಂದ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ಹೇಳಿ 2.78 ಲಕ್ಷ ರೂ. ಹಣ ಪಡೆದು ವಂಚನೆ ಮಾಡಿದ್ದ ಆರೋಪಿಯನ್ನು ದಾವಣಗೆರೆಯ ಸಿ.ಇ.ಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ತಾಲೂಕು ಹುಲ್ಲೇಹಾಳ್ ಗ್ರಾಮದ ಎಚ್.ಟಿ. ಸದ್ರುಲ್ಲಾ ಖಾನ್ ಬಂಧಿತ ಆರೋಪಿ. ಈತನು ತಾನು ರಾಜ್ಯಪಾಲರ ಸೆಕ್ರೆಟರಿಯೆಟ್ ಆಗಿ ಕೆಲಸ ಮಾಡುತ್ತಿದ್ದು. ವಿಶ್ವವಿದ್ಯಾಲಯಗಳಿಗೆ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯರ ಹೆಸರನ್ನು ನಾನೇ ನಾಮನಿರ್ದೇಶನ ಮಾಡುತ್ತೇನೆ ಎಂದು ಹೇಳಿಕೊಂಡು, ದಾವಣಗೆರೆ ನಗರದ ವೈದ್ಯರಿಗೆ ಇತ್ತೀಚೆಗೆ ದೂರವಾಣಿ ಕರೆ ಮಾಡಿದ್ದ. ವೈದ್ಯರಿಗೆ ರಾಜೀವ್ ಗಾಂಧಿ ವಿವಿಯಲ್ಲಿ ಮತ್ತು ವೈದ್ಯರ ಪತ್ನಿಗೆ ವಿ.ಟಿ.ಯುನಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸತ್ವ ಕೊಡಿಸುವುದಾಗಿ ನಂಬಿಸಿ, 2.78 ಲಕ್ಷ ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದ. ವೈದ್ಯರು ತಾವು ವಂಚನೆಗೆ ಒಳಗಾಗಿರುವ ಬಗ್ಗೆ ತಿಳಿದು ಆರೋಪಿಗೆ ಹಣ ವಾಪಸ್ ಕೇಳಿದಾಗ, ಆತನು ‘ನಿಮ್ಮ ವಿರುದ್ಧ ಸುಳ್ಳು ದೂರನ್ನು ದಾಖಲು ಮಾಡಿ ನಿಮ್ಮ ಕೆ.ಎಂ.ಸಿ ರಿಜಿಸ್ಟರ್ ಅನ್ನು ಬ್ಲಾಕ್ ಮಾಡಿಸುವುದಾಗಿ ಹೆದರಿಸಿದ್ದ. ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ. ಸಂತೋಷ ಮತ್ತು ಜಿ. ಮಂಜುನಾಥ, ಸಿ.ಇ.ಎನ್ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ, ಪ್ರಭಾರ ಪೊಲೀಸ್ ಇನ್ಸ್ಪೆಕ್ಟರ್ ವೈ. ಶಿಲ್ಪಾ, ಪಿಎಸ್‌ಐಗಳಾದ ಸುನೀಲ್ ತೇಲಿ, ರೂಪಾ ತೆಂಬದ್, ಸಿಬ್ಬಂದಿ ಅಶೋಕ, ಗೋವಿಂದರಾಜ್, ಸೋಮಶೇಖರ್, ಲೋಹಿತ್, ಯೋಗೀಶ್ ನಾಯ್ಕ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡವು ಆರೋಪಿಯನ್ನು ಬಂಧಿಸಿ, ಆತನಿಂದ ಕೃತ್ಯಕ್ಕೆ ಬಳಸಿದ 2 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ವಂಚನೆಯಾದ ಹಣದಲ್ಲಿ 2.19 ಲಕ್ಷ ರೂ.ಗಳನ್ನು ಆರೋಪಿಯ ಮತ್ತು ಆತನ ಪರಿಚಯಸ್ಥರ ಬ್ಯಾಂಕ್ ಖಾತೆಯಲ್ಲಿ ಫ್ರೀಜ್ ಮಾಡಿಸುವಲ್ಲಿ ಯಶಸ್ವಿಯಾದರು. ಆರೋಪಿಯ ಈ ಹಿಂದೆ ಇದೇ ರೀತಿ ವಿವಿಗಳಲ್ಲಿ ರಾಜ್ಯಪಾಲರ ನಾಮನಿರ್ದೇಶಿತ ಸದಸ್ಯತ್ವ ಕೊಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಸರ್ವಜನಿಕರಿಗೆ ವಂಚನೆ ಮಾಡಿದ್ದು, ಆತನ ವಿರುದ್ಧ ಬೆಂಗಳೂರು ನಗರದ ವಿಧಾನಸೌಧ, ಗೋವಿಂದರಾಜ ನಗರ ಪೊಲೀಸ್ ಠಾಣೆ, ಬೆಂಗಳೂರು ಜಿಲ್ಲೆಯ ಹೆಬ್ಬಗೋಡಿ ಪೊಲೀಸ್ ಠಾಣೆ, ಚಿತ್ರದುರ್ಗ ಜಿಲ್ಲೆಯ ಕೋಟೆ ಪೊಲೀಸ್ ಠಾಣೆ, ಕೋಲಾರ ಜಿಲ್ಲೆ, ಗೌಣಿಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.
