ದಾವಣಗೆರೆ : ಸರ್ಕಾರಿ ಮತ್ತು ಅರಣ್ಯ ಭೂಮಿಯಲ್ಲಿರುವ ಬೆಲೆ ಬಾಳುವ ಶ್ರೀಗಂಧದ ಮರಗಳಿಗೆ ಜಿಯೋ ಟ್ಯಾಗ್ ಮಾಡಿ, ಒಂದೇ ಒಂದು ಮರವೂ ಅಕ್ರಮ ಕಡಿತಲೆ ಆಗದಂತೆ ಎಚ್ಚರ ವಹಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದರು. ನಗರದಲ್ಲಿ ಗುರುವಾರ ಅರಣ್ಯ ಮತ್ತು ಪರಿಸರ ಇಲಾಖೆಯ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಶ್ರೀಗಂಧದ ಕಳವು ನಿಯಂತ್ರಿಸಲು ಜಿಯೋ ಟ್ಯಾಗ್ ಮಾಡಬೇಕು. ಕಳವಾದರೆ ಸಂಬಂಧಿಸಿದ ಗಸ್ತು ಸಿಬ್ಬಂದಿಯನ್ನು ಹೊಣೆ ಮಾಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಸೆಕ್ಷನ್ 4 ಆಗಿರುವ ಕಂದಾಯ ಭೂಮಿಯನ್ನು ಸೆಕ್ಷನ್ 17 ಮಾಡಿ, ಅರಣ್ಯ ಎಂದು ಘೋಷಿಸಲು ತ್ವರಿತ ಕ್ರಮ ಕೈಗೊಳ್ಳುವಂತೆ ತಿಳಿಸಿದ ಸಚಿವರು, ಹವಾಮಾನ ಬದಲಾವಣೆಯ ಪ್ರಸಕ್ತ ಕಾಲಘಟ್ಟದಲ್ಲಿ ಹಸಿರು ಹೊದಿಕೆಯ ಹೆಚ್ಚಳವೇ ಪರಿಹಾರವಾಗಿದ್ದು, ಮುಂಬರುವ ವನ ಮಹೋತ್ಸವದ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಎತ್ತರದ ಸಸಿಗಳನ್ನು ನೆಟ್ಟು ಪೋಷಿಸುವಂತೆ ತಿಳಿಸಿದರು.
