davangere fine art college

ದಾವಣಗೆರೆ ದೃಶ್ಯಕಲಾ ಕಾಲೇಜಿನಲ್ಲಿ ಅರಳಿದ ಕಲಾಕೃತಿಗಳು

ದಾವಣಗೆರೆ: ನಗರದ ದೃಶ್ಯಕಲಾ ಕಾಲೇಜಿನ ಕ್ಯಾಂಪಸ್‌ನಲ್ಲಿ ಭಾನುವಾರ ದೃಶ್ಯಕಾವ್ಯವೇ ಅನಾವರಣಗೊಂಡಿತ್ತು. ವಾರ್ಷಿಕೋತ್ಸವ ನಿಮಿತ್ತ ಆಯೋಜಿಸಿದ್ದ ಕಲಾ ಮೇಳ ಕಲಾಸಕ್ತರ ಹಸಿವು ಇಂಗಿಸಿತು.

ಕಾಲೇಜು ಆವರಣಕ್ಕೆ ಕಾಲಿಡುತ್ತಲೇ ವಿದ್ಯಾರ್ಥಿಗಳು ರಚಿಸಿದ್ದ ಕಲಾಕೃತಿಗಳು ಆಕರ್ಷಿಸಿದವು. ಬೇಕಾಬಿಟ್ಟಿ ತ್ಯಾಜ್ಯ ಎಸೆಯುವ ನಾಗರಿಕರ ಮನಸ್ಥಿತಿಯನ್ನು ದುರ್ಗೇಶ, ಮಹಾಂತೇಶ್ ಅವರ ಕಲಾಕೃತಿ ತೆರೆದಿಟ್ಟಿತು.

ಮರದೆತ್ತರಕ್ಕೆ ಕಟ್ಟಿದ ಫೈಬರ್ ಕುರ್ಚಿಗಳು ಹಾಗೂ ತಂತಿ ಬೇಲಿ ರಚನೆ ಮನುಷ್ಯನ ಅಧಿಕಾರದಾಹ ಎಂದಿದ್ದರೂ ಮುಳ್ಳಿಗೆ ಸಮಾನ ಎಂಬ ಸಂದೇಶವನ್ನು ಸಾರುತ್ತಿತ್ತು. ವಿದ್ಯಾರ್ಥಿ ವಿಶ್ವಾಸ್ ಇದನ್ನು ರಚಿಸಿದ್ದನು.
ಧೂಮಪಾನ ಮತ್ತು ಮದ್ಯವ್ಯಸನ ಬೀರುವ ದುಷ್ಪರಿಣಾಮ ಕುರಿತ ವಿಶೇಷ ಕಲಾಕೃತಿಯನ್ನು ಫೌಂಡೇಶನ್ ವಿಭಾಗದ ಮಧು-ನಂದಿತಾ ಮತ್ತವರ ತಂಡ ಚಿತ್ರಿಸಿತ್ತು. ಅನ್ವಯಿಕ ಕಲಾ ವಿಭಾಗದ ನಿಖಿತ್ ವಾಮಾಚಾರಕ್ಕಾಗಿ ನಡೆಯುವ ಪ್ರಾಣಿಬಲಿ ಹಾಗೂ ಪಬ್ ಸಂಸ್ಕೃತಿಯಿಂದ ಹಾಳಾಗುವ ಯುವಕರ ಕುರಿತು ತನ್ನ ಮಾದರಿಯಲ್ಲಿ ಚಿತ್ರಿಸಿದ್ದರು.

ಹೆಚ್ಚುತ್ತಿರುವ ಮದ್ಯಪಾನ ಕುರಿತು ವಾಸ್ತುಶಿಲ್ಪ ವಿಭಾಗದ ಗುರುರಾಜ್ ವಗ್ಗ ತಮ್ಮ ಮಾದರಿ ಮೂಲಕ ಬಿಡಿಸಿಟ್ಟರು. ಜಂಕ್‌ಫುಡ್ ಪರಿಣಾಮ ಮಾನವ ಮಾತ್ರೆ, ಔಷಧಿಗಳ ಮೇಲೆ ಅವಲಂಬಿತನಾಗಿರುವ ಮಾದರಿಯನ್ನು ಫೌಂಡೇಶನ್ ವಿಭಾಗದ ರಾಹುಲ್, ಜೆ.ಆರ್. ರಾಜೇಶ್, ಬಿ. ಕೊಟ್ರೇಶ್ ತಂಡ ಪ್ರದರ್ಶಿಸಿತು.

ಉದ್ದದ ಹಾಳೆ ಮೇಲೆ ಹಸ್ತ ಮತ್ತು ಹೆಜ್ಜೆ ಗುರುತುಗಳನ್ನು ಮೂಡಿಸಿ ಪ್ರತಿಯೊಬ್ಬರನ್ನೂ ಮನಃಸಾಕ್ಷಿ ಕಾಡುತ್ತದೆ ಎಂಬ ಮಾದರಿಯನ್ನು ವಿದ್ಯಾರ್ಥಿನಿ ಯಶಸ್ವಿನಿ ಕೆ. ಕಲಾಲ್ ಮತ್ತವರ ತಂಡ ಅನಾವರಣಗೊಳಿಸಿದ್ದರು.
ಎಂ.ಜಿ. ಚಂದ್ರಶೇಖರ್, ಶ್ರೀಲಕ್ಷ್ಮಿ, ಪ್ರತಿಭಾ, ಮಧು, ಎಸ್. ವಿನಾಯಕ್, ಪ್ರೇಂಕುಮಾರ್ ಮತ್ತಿತರ ವಿದ್ಯಾರ್ಥಿಗಳ ಕುಂಚದಲ್ಲಿ ಅರಳಿದ ಕಲಾಕೃತಿಗಳು ಅಲ್ಲಿದ್ದವು.

ವುಡ್ ಕಟಿಂಗ್ ಆರ್ಟ್, ಕೆಲಾಗ್ರಫಿ, ಸಾಫ್ಟ್ ಪೇಸ್ಟಲ್ ವರ್ಕ್, ಪೆನ್ ಅಂಡ್ ಇಂಕ್, ಡಿಜಿಟಲ್ ವರ್ಣ ಚಿತ್ರಗಳು, ಕ್ಯಾರಿಕೇಚರ್, ಸೋಪ್, ಪಿಒಪಿಯಲ್ಲಿ ಅರಳಿದ ಮಾದರಿಗಳು, ಲ್ಯಾಂಡ್‌ಸ್ಕೇಪ್, ರಿಯಾಲಿಸ್ಟಿಕ್ ವರ್ಕ್, ಕೊಲಾಜ್, 2ಡಿ ಡಿಸೈನ್ಸ್, ರಿಪ್ರೊಡಕ್ಷನ್, ವಾಣಿಜ್ಯೋತ್ಪನ್ನ ಚಿತ್ರಗಳು, ವಾಟರ್ ಪೇಂಟಿಂಗ್, ಮಿನಿಯೇಚರ್, ಪೋರ್ಟ್ ರೈಟ್ ಮತ್ತಿತರ ಚಿತ್ರಕಲಾಕೃತಿಗಳನ್ನು ತೂಗು ಹಾಕಲಾಕಿತ್ತು. ಒಂದೆಡೆ ನವ್ಯ ಶೈಲಿಯ ಕಿವಿಯೋಲೆ, ಬಳೆ, ಉಂಗುರ ಮಾರಾಟಕ್ಕಿದ್ದವು!

ಸಾರ್ವಜನಿಕರನ್ನು ಕಲೆಯತ್ತ ಆಕರ್ಷಿಸುವುದು, ಚಿತ್ರಕಲಾಕೃತಿಗಳನ್ನು ಖರೀದಿಸುವ ಪರಿಪಾಠ ಬೆಳೆಸುವುದು ಕಲಾಮೇಳದ ಉದ್ದೇಶವಾಗಿದೆ ಎಂದು ಉಪನ್ಯಾಸಕ ಸಂತೋಷ್‌ಕುಮಾರ್ ಹೇಳಿದರು.

ವಿದ್ಯಾರ್ಥಿಗಳಿಂದ ಅರ್ಜಿ ಪಡೆದು ಮೇಳಕ್ಕೆ ಆಯ್ಕೆ ಮಾಡಲಾಗಿದೆ. ಇಲ್ಲಿ ಐದುನೂರರಿಂದ 50 ಸಾವಿರ ರೂ. ವರೆಗಿನ ಬೆಲೆಗೆ ಕಲಾಕೃತಿಗಳು ಲಭ್ಯವಿದೆ ಎಂದು ವಿದ್ಯಾರ್ಥಿ ಹರಿಜನ್ ದುರ್ಗೇಶ್ ಹೇಳಿದರು. ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಬಸವರಾಜ ಬಣಕಾರ ಚಿತ್ರ ರಚಿಸುವ ಮೂಲಕ ಕಲಾಮೇಳ ಉದ್ಘಾಟಿಸಿದರು. ವಿವಿ ಹಣಕಾಸು ಅಧಿಕಾರಿ ಡಾ.ಜೆ.ಕೆ. ರಾಜು, ಪ್ರಾಚಾರ್ಯ ಡಾ.ರವೀಂದ್ರ ಎಸ್. ಕಮ್ಮಾರ್ ಇದ್ದರು.

90ಕ್ಕೂ ಹೆಚ್ಚು ಅಂಕ ಪಡೆದವರು ಚಿತ್ರಕಲೆ ಅಭ್ಯಾಸಕ್ಕೆ ಬರೋದಿಲ್ಲ. ಕಲೆ, ಪ್ರತಿಭೆ ಇದ್ದವರು ಬರುತ್ತಾರೆ. ಇತರೆ ಕೋರ್ಸ್‌ಗಳಿಗಿಂತ ಇದು ಭಿನ್ನ. ಕಲಾವಿದರಿಗೆ ಕಲೆಯೇ ಧ್ಯಾನದಂತೆ. ಸಿಗುವ ಅವಕಾಶ ಬಳಸಿಕೊಳ್ಳಬೇಕು. ಕಲಾ ವಿದ್ಯಾರ್ಥಿಗಳು ಸ್ಮಾರ್ಟ್ ಸಿಟಿಗೆ ತಮ್ಮದೇ ಕೊಡುಗೆ ನೀಡಬೇಕು.
ಪ್ರೊ.ಬಸವರಾಜ ಬಣಕಾರ
ದಾವಣಗೆರೆ ವಿವಿ ಕುಲಸಚಿ

ದಾವಣಗೆರೆಯಲ್ಲಿ ಇಂಥಹ ಕಲಾಶಾಲೆ ಇರುವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಶಾಲಾ ಮಕ್ಕಳು, ಸಾರ್ವಜನಿಕರು ಇಲ್ಲಿಗೆ ಬರುವಂತಾಗಬೇಕು. ತಿಂಗಳಿಗೆ ನಿಗಧಿತ ಕಾರ್ಯಕ್ರಮ ಆಯೋಜಿಸಬೇಕು. ಕಲಾ ವಿದ್ಯಾರ್ಥಿಗಳು ಸಣ್ಣ ಲಾಭಕ್ಕಾದರೂ ಕಲಾ ಚಟುವಟಿಕೆ ಮಾಡಿದರೆ ವಿವಿ ಬೆಳವಣಿಗೆಗೂ ಅನುಕೂಲವಾಗಲಿದೆ.
ಡಾ.ಜೆ.ಕೆ. ರಾಜು ವಿವಿ ಹಣಕಾಸು ಅಧಿಕಾರಿ