ದಾವಣಗೆರೆ : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಬೆಣ್ಣೆನಗರಿ ದಾವಣಗೆರೆಯಲ್ಲಿ ಸೋಮವಾರ ವರ್ಣರಂಜಿತ ತೆರೆ ಬಿದ್ದಿತು. ಕಲೆಗೆ ಇರುವ ಶಕ್ತಿ, ಯುವ ಜನರಲ್ಲಿರುವ ಪ್ರತಿಭೆಯ ಪ್ರದರ್ಶನಕ್ಕೆ ಎರಡು ದಿನಗಳ ಈ ಉತ್ಸವ ಸಾಕ್ಷಿಯಾಯಿತು. ನಾಡಿನ 31 ಜಿಲ್ಲೆಗಳ ಸ್ಪರ್ಧಿಗಳಲ್ಲದೇ ಹೊರ ರಾಜ್ಯದ ಕಲಾವಿದರು ವೇದಿಕೆಯಲ್ಲಿ ಕಿಚ್ಚು ಹಚ್ಚಿದರು. ಹಾಡು, ಕುಣಿತ, ಚಿತ್ರಕಲೆ, ಕಥೆ, ಕಾವ್ಯ ರಚನೆ, ಘೋಷಣೆಯಲ್ಲಿ 1200 ಸ್ಪರ್ಧಿಗಳು ಭಾಗವಹಿಸಿ ಕಲಾಸಕ್ತರ ಮನ ರಂಜಿಸಿದರು. ಒಟ್ಟು 7 ವೇದಿಕೆಗಳಲ್ಲಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. 30 ಮಂದಿ ತೀರ್ಪುಗಾರರು ವಿಜೇತರನ್ನು ಆಯ್ಕೆ ಮಾಡಿದರು. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸ್ಪರ್ಧಿಗಳಿಗೆ ಊಟ, ವಸತಿ ಮತ್ತು ಸಾರಿಗೆ ಸೌಲಭ್ಯ ಕಲ್ಪಿಸಲಾಗಿತ್ತು. ಮೊದಲ ದಿನ ಊಟದ ವಿಚಾರದಲ್ಲಿ ಸ್ವಲ್ಪ ಗೊಂದಲವಾಯಿತಾದರೂ, ಉಳಿದಂತೆ ಯಾವುದೇ ತೊಂದರೆಯಾಗಲಿಲ್ಲ. ಯುವಜನರಿಗಾಗಿ ಬೆಂಗಳೂರಿನ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಸಿಬ್ಬಂದಿಯಿಂದ ಇಲ್ಲಿನ ಕುಂದುವಾಡ ಕೆರೆಯಲ್ಲಿ ಜಲಸಾಹಸ ಕ್ರೀಡೆ, ಎಂಬಿಎ ಕಾಲೇಜು ಮೈದಾನದಲ್ಲಿ ಕೃತಕ ಗೋಡೆ ಹತ್ತುವ ತರಬೇತಿ ನೀಡಲಾಯಿತು. ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮತ್ತು ಬಾಲಿವುಡ್ ಗಾಯಕಿ ಹಂಸಿಕಾ ಅಯ್ಯರ್ ನಡೆಸಿಕೊಟ್ಟ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ಯುವಜನರನ್ನು ಸೆಳೆಯಿತು. ಯುವಜನೋತ್ಸವದ ಸಮಾರೋಪ ಸಮಾರಂಭ ಸೋಮವಾರ ಸಂಜೆ ಇಲ್ಲಿನ ಬಿಐಇಟಿ ಕಾಲೇಜು ಆವರಣದ ಎಸ್‌ಎಸ್‌ಎಂ ಸಾಂಸ್ಕೃತಿಕ ಸಭಾಂಗಣದಲ್ಲಿ ನಡೆಯಿತು. ಈ ವೇದಿಕೆಯಲ್ಲಿ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ 50 ಮಂದಿ ಹಿರಿಯ ಸಾಧಕರನ್ನು ಗೌರವಿಸಲಾಯಿತು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಕೆ.ಎಸ್. ಬಸವಂತಪ್ಪ, ಬಿ.ಪಿ. ಹರೀಶ್, ಮೇಯರ್ ಕೆ. ಚಮನ್ ಸಾಬ್, ಡಿಸಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಸುರೇಶ ಇಟ್ನಾಳ್, ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಇದ್ದರು. … (ಬಾಕ್ಸ್) ಸ್ಪರ್ಧೆಗಳ ವಿಜೇತರ ವಿವರ ಘೋಷಣೆ : ಬೆಂಗಳೂರು ನಗರ ಜಿಲ್ಲೆಯ ಚಂದನ್ ಎಂ. ನಾಯ್ಕ (ಪ್ರಥಮ), ಚಿಕ್ಕಮಗಳೂರಿನ ವರುಣ್ ಡಿ. ಆರ್ಯ (ದ್ವಿತೀಯ), ಹಾಸನದ ದೇಶರಾಜ್ ಪರಿಪೂರ್ಣ (ತೃತೀಯ). ಕವನ ರಚನೆ: ಬೆಳಗಾವಿಯ ಶಾಂಭವಿ ಕುಶಪ್ಪ ತೇರ್ಲಿ (ಪ್ರಥಮ), ಹಾಸನದ ಶೃತಿ ಎಸ್. ರಾಜ್ (ದ್ವಿತೀಯ), ಉತ್ತರ ಕನ್ನಡದ ಅಸ್‌ಪಿಯಾ ಇರ್ಶಾದ್ ಅಹಮದ್ ಶೇಕ್ (ತೃತೀಯ). ಚಿತ್ರಕಲೆ: ಗದಗದ ವಿನುತ ಎನ್. ಅಕ್ಕಸಾಲಿಗ (ಪ್ರಥಮ), ದಾವಣಗೆರೆಯ ಕಾರ್ತಿಕ್ ಆಲೂರು (ದ್ವಿತೀಯ), ಉತ್ತರ ಕನ್ನಡದ ಪ್ರಶಾಂತ ಬಾರುಗೌಡ (ತೃತೀಯ). ಕಥೆ ಬರೆಯುವುದು : ಹಾಸನದ ತೀರ್ಥ ಪೂವಯ್ಯ (ಪ್ರಥಮ), ಚಿಕ್ಕಮಗಳೂರಿನ ಎಸ್. ಗಗನ್ (ದ್ವಿತೀಯ), ರಾಮನಗರದ ಜಿ.ಕೆ. ರವಿಕುಮಾರ್ (ತೃತೀಯ). ವಿಜ್ಞಾನ ವಸ್ತು ಪ್ರದರ್ಶನ: ಬಳ್ಳಾರಿಯ ಜೆ.ಎನ್. ಹರ್ಷ ಮತ್ತು ತಂಡದವರು (ಪ್ರಥಮ), ಮಡಿಕೇರಿ ಶ್ವೇತಾನ್.ಜಿ.ರಾಯ್ (ದ್ವಿತೀಯ), ದಾವಣಗೆರೆಯ ವಿ.ಜೆ. ಜೀವನ (ತೃತೀಯ). ಜಾನಪದ ಗೀತೆ : ಮಂಡ್ಯ (ಪ್ರಥಮ), ಬಾಗಲಕೋಟೆ (ದ್ವಿತೀಯ), ಚಾಮರಾಜನಗರ (ತೃತೀಯ). ಜಾನಪದ ನೃತ್ಯ: ಮಂಡ್ಯ (ಪ್ರಥಮ), ಉಡುಪಿ (ದ್ವಿತೀಯ), ಬಾಗಲಕೋಟೆ (ತೃತೀಯ).
