ಸಿನಿಮಾ

ರಾಗಿ ಖರೀದಿ ಹಣ ಪಾವತಿಸಲು ಆಗ್ರಹ

ದಾವಣಗೆರೆ : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತಮ್ಮಿಂದ ಖರೀದಿಸಿದ ರಾಗಿಯ ಹಣ ಪಾವತಿಸುವಂತೆ ಒತ್ತಾಯಿಸಿ ಜಗಳೂರು ತಾಲೂಕಿನ ವಿವಿಧ ಗ್ರಾಮಗಳ ರೈತರು ಇಲ್ಲಿನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
 ಕಚೇರಿ ಎದುರು ಜಮಾಯಿಸಿದ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದರು.
 ತಾಲೂಕಿನ ವಿವಿಧ ಗ್ರಾಮಗಳ ನೂರಾರು ರೈತರು ಜಗಳೂರಿನ ಖರೀದಿ ಕೇಂದ್ರದಲ್ಲಿ ರಾಗಿಯನ್ನು ಮಾರಾಟ ಮಾಡಿದ್ದು ಅದಕ್ಕೆ ಪ್ರತಿಯಾಗಿ ಸರಿಯಾದ ಬಿಲ್ ನೀಡಿಲ್ಲ. ನಾಲ್ಕೈದು ತಿಂಗಳು ಕಳೆದರೂ ತಮಗೆ ಹಣ ಬಂದಿಲ್ಲ ಎಂದು ದೂರಿದರು.
 ನಮ್ಮದು ಬರಪೀಡಿತ ತಾಲೂಕಾಗಿದ್ದು ಆರ್ಥಿಕ ಪರಿಸ್ಥಿತಿ ಸರಿ ಇಲ್ಲ. ಮುಂಗಾರು ಹಂಗಾಮಿಗೆ ಬೀಜ, ಗೊಬ್ಬರ ಖರೀದಿಗೆ ಹಣ ಬೇಕಾಗಿದೆ. ನಾವು ನೀಡಿರುವ ರಾಗಿಗೆ ‘ಗ್ರೇನ್ ವೋಚರ್’ ಕೊಡಬೇಕು, ಹಣ ಪಾವತಿಯಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
 ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ರವಿ ಮಾತನಾಡಿ, ರೈತರಿಗೆ ಗ್ರೇನ್ ವೋಚರ್ ನೀಡದಿರುವುದು, ಹಣ ಪಾವತಿಯಾಗದಿರುವುದು ಈ ಬಗ್ಗೆ ತನಿಖೆ ನಡೆಸಿ ವರದಿ ನಿಡುವಂತೆ ಸರ್ಕಾರ ತಮ್ಮನ್ನೂ ಒಳಗೊಂಡ ಮೂವರು ಅಧಿಕಾರಿಗಳ ತಂಡವನ್ನು ರಚಿಸಿತ್ತು ಎಂದು ತಿಳಿಸಿದರು.
 ಈ ನಡುವೆ ವಿಧಾನಸಭಾ ಚುನಾವಣೆ ಇದ್ದುದರಿಂದ ಗಮನ ಹರಿಸಲು ಆಗಿರಲಿಲ್ಲ. ಈಗ ಮತ್ತೆ ತನಿಖೆ ಚುರುಕುಗೊಂಡಿದೆ. ಮೇ 31ರ ಒಳಗಾಗಿ ಪೂರ್ಣಗೊಳಿಸಿ, ವರದಿ ನೀಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಭರವಸೆ ನೀಡಿದರು. ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹೇಂದ್ರ ಇದ್ದರು.
 ರೈತ ಮುಖಂಡರಾದ ನಿಂಗಪ್ಪ, ಗುರುಸಿದ್ದಣ್ಣ, ಮಹೇಶ್, ಬಸವರಾಜ್, ರವಿ, ಮಹಾಂತೇಶ್, ಮಲ್ಲೇಶಪ್ಪ, ಈರಣ್ಣ ಇತರರು ಪಾಲ್ಗೊಂಡಿದ್ದರು.

Latest Posts

ಲೈಫ್‌ಸ್ಟೈಲ್