ದಾವಣಗೆರೆ ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೆ

ದಾವಣಗೆರೆ: ನಗರದ ನಿಟ್ಟುವಳ್ಳಿ ಇಎಸ್‌ಐ ಆಸ್ಪತ್ರೆ ಸಾಮರ್ಥ್ಯವನ್ನು 100 ಹಾಸಿಗೆಗೆ ಹೆಚ್ಚಿಸಿ ಮೇಲ್ದರ್ಜೆಗೇರಿಸುವಂತೆ ಕೇಂದ್ರ ಕಾರ್ಮಿಕ ಸಚಿವ ಸಂತೋಷ್‌ಕುಮಾರ್ ಗಂಗವಾರ್ ಅವರಿಗೆ ಸಂಸದ ಜಿ.ಎಂ. ಸಿದ್ದೇಶ್ವರ್ ಮನವಿ ಸಲ್ಲಿಸಿದರು.

ದೆಹಲಿಯ ಕಾರ್ಮಿಕ ಸಚಿವರ ಕಚೇರಿಗೆ ಗುರುವಾರ ಭೇಟಿ ನೀಡಿದ ಸಂಸದರು, ಈಗಾಗಲೇ ವಿಷಯ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗಮನ ಸೆಳೆದರು.

ನಗರದ ಈ ಆಸ್ಪತ್ರೆ 28-30 ವರ್ಷಗಳಿಂದ ವಿಮೆ ಹೊಂದಿದ ಕಾರ್ಮಿಕರಿಗೆ ಆಶಾಕಿರಣವಾಗಿದೆ. 2012ರಲ್ಲಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಿ 50 ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸಲಾಗಿತ್ತು.

ಶಿವಮೊಗ್ಗ, ಬಳ್ಳಾರಿ, ಭದ್ರಾವತಿ, ಚಿತ್ರದುರ್ಗ, ಹರಿಹರ, ಸೇರಿದಂತೆ ಕಾರ್ಮಿಕರಿಗೆ ಆಸ್ಪತ್ರೆ ಸೇವೆ ನೀಡುತ್ತಿದೆ. ಹಾಸಿಗೆಗಳ ಕೊರತೆ ಹಿನ್ನೆಲೆಯಲ್ಲಿ ಸಮರ್ಪಕ ಸೇವೆ ದೊರೆಯುತ್ತಿಲ್ಲ. ಹಾಸಿಗೆ ಸಾಮರ್ಥ್ಯವನ್ನು 100ಕ್ಕೆ ಹೆಚ್ಚಿಸಬೇಕೆಂದು ಮನವಿ ಮಾಡಿದರು.

ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಶೀಘ್ರವೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.