
ದಾವಣಗೆರೆ : ಮರಗಳು ನಿಜವಾದ ಮಾನವ ಧರ್ಮಪೀಠ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಅರಣ್ಯ ಇಲಾಖೆ, ಮಹಾನಗರ ಪಾಲಿಕೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘದ ಆಶ್ರಯದಲ್ಲಿ ನಗರದ ಹೊರ ವಲಯದಲ್ಲಿನ ಬಾಡಾ ಕ್ರಾಸ್ ಬಳಿಯ ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಯಾವುದೇ ಧರ್ಮದವರು ಗುಡಿ, ಮಸೀದಿ, ಚರ್ಚ್, ಬಸದಿಗಳನ್ನು ನಿರ್ಮಿಸಿದಲ್ಲಿ ಆಯಾ ಸಮಾಜದವರು ಮಾತ್ರ ಹೋಗುತ್ತಾರೆ. ಆದರೆ ಮರ-ಗಿಡಗಳ ನೆರಳಿಗೆ ಎಲ್ಲ ಧರ್ಮ, ಸಮಾಜದವರು ಬಂದು ನಿಲ್ಲುತ್ತಾರೆ ಎಂದು ತಿಳಿಸಿದರು. ಯಾವುದೇ ಕುಟುಂಬದಲ್ಲಿ ಮಗು ಜನನವಾದ ನಂತರ ಜೀವವಿಮೆ ಮಾಡಿಸುತ್ತಾರೆ. ಅದರಂತೆ ಒಂದು ಸಸಿ ನೆಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮಗು ಬೆಳೆದು 20 ವರ್ಷದ ನಂತರ ಜೀವ ವಿಮೆ ಅವರ ಜೀವನಕ್ಕೆ ಅಧಾರವಾದರೆ, ಮರವೂ ಬೆಳೆದು ಉತ್ತಮ ಫಲ ನೀಡುವುದರ ಜತೆಗೆ ಶುದ್ಧ ಗಾಳಿಯನ್ನು ಕೊಡುತ್ತದೆ ಎಂದರು. ಪ್ರಕೃತಿ ಯಾವುದೇ ಆಪೇಕ್ಷೆಯಿಲ್ಲದೇ ಸಾಕಷ್ಟು ಕೊಡುಗೆಯನ್ನು ನೀಡುತ್ತಿದೆ. ಆದರೆ ಅದೇ ಪರಿಸರಕ್ಕೆ ನಮ್ಮ ಕೊಡುಗೆ ಏನು ಎಂದು ಅಂತರಾತ್ಮವನ್ನು ಪರೀಕ್ಷಿಸಿಕೊಂಡಾಗ ಮಾತ್ರ ಪರಿಸರ ರಕ್ಷಣೆ ಮಾಡಲು ಸಾಧ್ಯ ಎಂದು ಹೇಳಿದರು. ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ಪರಿಸರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ, ಪ್ರಕೃತಿಗೆ ದುಃಖ ನೀಡದೇ ಪರಿಸರ ಸಂರಕ್ಷಣೆಗೆ ಅನುಕೂಲವಾಗುವ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಒಮ್ಮೆ ಬಳಸಿ ಬಿಸಾಡುವಂತಹ ಪ್ಲಾಸ್ಟಿಕ್‌ನ್ನು ಎಲ್ಲೆಂದರಲ್ಲಿ ಎಸೆಯದೇ ನಿರ್ದಿಷ್ಟವಾಗಿ ಕಸದ ಬುಟ್ಟಿಗಳಲ್ಲಿ ಹಾಕಬೇಕು. ಪ್ಲಾಸ್ಟಿಕ್ ತ್ಯಜಿಸಿ ಪರಿಸರವನ್ನು ಉಳಿಸಬೇಕಾಗಿದೆ. ಸಣ್ಣ ಬದಲಾವಣೆಗಳಿಂದಲೇ ನಾವು ಪರಿಸರಕ್ಕೆ ದೊಡ್ಡ ಕೊಡುಗೆ ನೀಡಬಹುದು ಎಂದು ಹೇಳಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರಣ್ಣವರ ಮಾತನಾಡಿ, ಭವಿಷ್ಯದ ಪೀಳಿಗೆಗೆ ಉತ್ತಮವಾದ ಆರೋಗ್ಯ, ಶುದ್ಧ ಗಾಳಿ ಕೊಡುಗೆಯಾಗಿ ನೀಡಬೇಕಾದರೆ ಪರಿಸರ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇದೇ ವೇಳೆ ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು. ರೈತ ಮುಖಂಡ ಬಲ್ಲೂರು ರವಿಕುಮಾರ್ ಪರಿಸರ ಸಂರಕ್ಷಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಜೈನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ನಿರ್ದೇಶಕ ಮತ್ತು ಪ್ರಾಚಾರ್ಯ ಡಾ.ಡಿ.ಬಿ. ಗಣೇಶ್, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್, ಹೆಚ್ಚುವರಿ ಎಸ್ಪಿ ಜಿ. ಮಂಜುನಾಥ್, ಜೈನ್ ಸಮೂಹ ಸಂಸ್ಥೆಗಳ ಸಲಹೆಗಾರ ಡಾ. ಎಸ್. ಮಂಜಪ್ಪ, ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ. ನಾಯಕ್, ಪೌರಾಯುಕ್ತೆ ರೇಣುಕಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ. ಗೋಪ್ಯಾ ನಾಯ್ಕ್, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜ್, ಸರ್ಕಾರಿ ವಕೀಲ ಶಾಮನೂರು ಪ್ರಕಾಶ ಇದ್ದರು.