ಇನ್ನೂ ನೂರು ವರ್ಷ ಮೀಸಲಾತಿ ಇರಲಿ

ದಾವಣಗೆರೆ : ದೇಶದಲ್ಲಿ ಈಗಿರುವ ಪರಿಸ್ಥಿತಿಯನ್ನು ಅವಲೋಕಿಸಿದರೆ ಇನ್ನೂ ನೂರು ವರ್ಷ ಮೀಸಲಾತಿ ಇರಬೇಕು ಎಂದು ಹುಬ್ಬಳ್ಳಿ ಮತ್ತು ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಅಭಿಮತ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯಕ್ಕಾಗಿ ನಾಗರಿಕರು ಸಂಸ್ಥೆಯಿಂದ ನಗರದ ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ಮಾಡಿದ ಅಪಚಾರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ 10 ವರ್ಷಕ್ಕೊಮ್ಮೆ ಮೀಸಲಾತಿ ಸಮೀಕ್ಷೆ ನಡೆಸಬೇಕು ಎಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದ್ದರು. ಮೀಸಲಾತಿಯಿಂದಾಗಿ ದೇಶದಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ಹಾಗೂ ಸುಧಾರಣೆ ಕಾಣಲು ಸಾಧ್ಯವಾಗಿದೆ. ಪ್ರಸಕ್ತ ಸ್ಥಿತಿಯಲ್ಲಿ ಇದು ಮುಂದುವರಿಯಬೇಕು ಎಂದು ಹೇಳಿದರು.
ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲೂ ಈ ವಿಷಯ ಚರ್ಚೆಗೆ ಬಂದಿತ್ತು. ಆ ಸಂದರ್ಭದಿಂದ ಇಂದಿನವರೆಗೂ ಬಿಜೆಪಿ ಮೀಸಲಾತಿಯನ್ನು ಮುಂದುವರಿಸುವ ಕೆಲಸ ಮಾಡಿದೆ ಎಂದರು.
ಕೋಲಾರ ಮಾಜಿ ಸಂಸದ ಎಸ್. ಮುನಿಸ್ವಾಮಿ ಮಾತನಾಡಿ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರು ಯಾವತ್ತೋ ರಾಜ್ಯದ ಮುಖ್ಯಮಂತ್ರಿ ಆಗಬೇಕಿತ್ತು. ಜಿ.ಪರಮೇಶ್ವರ್ ಸಿಎಂ ಆಗುತ್ತಾರೆಂದು ಚುನಾವಣೆಯಲ್ಲಿ ಅವರು ಸೋಲುವಂತೆ ಮಾಡಲಾಯಿತು. ಇದಕ್ಕೆಲ್ಲ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಆಪಾದಿಸಿದರು.
ರಾಜೀನಾಮೆಗೆ ಆಗ್ರಹ: ರಾಜ್ಯದಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದಂತೆ ಸುಮಾರು 185 ಕೋಟಿ ರೂ.ಹಗರಣ ನಡೆದಿದ್ದು, ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಕೀಲ ವಿವೇಕ್ ರೆಡ್ಡಿ, ದಾವಣಗೆರೆ ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಮುರುಗೇಶ್ ಆರಾಧ್ಯ ಇದ್ದರು. ಕೃಷ್ಣಮೂರ್ತಿ ತ್ಯಾವಣಗಿ ಸ್ವಾಗತಿಸಿದರು.
ಬಾಕ್ಸ್…
ತುರ್ತುಪರಿಸ್ಥಿತಿ ಸಂವಿಧಾನಕ್ಕೆ ಕಪ್ಪುಚುಕ್ಕೆ
ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿ ಸಂವಿಧಾನಕ್ಕೆ ಕಪ್ಪುಚುಕ್ಕೆ ಇರಿಸಿತಲ್ಲದೆ, ಡಾ.ಬಿ.ಆರ್.ಅಂಬೇಡ್ಕರ್ ಅವರು ಎಳೆದು ತಂದಿದ್ದ ಪ್ರಜಾಪ್ರಭುತ್ವದ ಪ್ರಗತಿಯ ತೇರನ್ನು ಪಾತಾಳಕ್ಕೆ ತಳ್ಳಿತು ಎಂದು ಶಾಸಕ ಅರವಿಂದ್ ಬೆಲ್ಲದ್ ದೂರಿದರು.
ಕಾಂಗ್ರೆಸ್ 1975ರಲ್ಲಿ ತನ್ನ ಅಧಿಕಾರ ಉಳಿಸಿಕೊಳ್ಳಲು ಪದೇಪದೆ ಸಂವಿಧಾನದ ಹಲವು ಪರಿಚ್ಛೇದಗಳಿಗೆ ಬದಲಾವಣೆ ತಂದು ಅಂಬೇಡ್ಕರ್ ಅವರ ಸಂವಿಧಾನದ ಮೂಲ ಆಶಯ ಮಣ್ಣುಪಾಲು ಮಾಡಿತು ಎಂದು ಹೇಳಿಸದರು.
1971ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನಿಂದ ಪ್ರಧಾನಮಂತ್ರಿ ಇಂದಿರಾಗಾಂಧಿ ಅವರು ಸಂಸತ್ ಸ್ಥಾನ ಕಳೆದುಕೊಂಡಿದ್ದರೆ ಹಿರಿಯ ನಾಯಕ ಡಾ.ಬಾಬು ಜಗಜೀವನ್ ರಾಂ ಅವರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಅವರು ಪ್ರಧಾನಮಂತ್ರಿ ಆಗಬಾರದೆಂದು ಇಂದಿರಾಗಾಂಧಿ ವ್ಯವಸ್ಥಿತವಾಗಿ ಬದಲಾವಣೆ ಮಾಡಿದರು.
ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು, ಅವರು ತೀರಿಕೊಂಡಾಗ ದೆಹಲಿಯಲ್ಲಿ ಅಂತಿಮ ಸಂಸ್ಕಾರಕ್ಕೆ ಅನುಮತಿ ನೀಡದಂತೆ ಮಾಡಿದ್ದು ಕಾಂಗ್ರೆಸ್. ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲು ಬಿಜೆಪಿ ಸರ್ಕಾರ ಬರಬೇಕಾಯಿತು ಎಂದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…