ದಾವಣಗೆರೆ ಜಿಲ್ಲೆಯಲ್ಲಿ ಶೇ. 77.21ರಷ್ಟು ಮತದಾನ

davanagere election

ದಾವಣಗೆರೆ: ಮಳೆ ಭೀತಿ, ಮತಯಂತ್ರಗಳ ಬದಲು, ತಾಂತ್ರಿಕ ದೋಷ, ವಿಳಂಬ ಮತದಾನ ಸೇರಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ದಾವಣಗೆರೆ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನವಾಗಿದ್ದು ಶೇ. 77.21ರಷ್ಟು ಮತ ಚಲಾವಣೆಯಾಗಿವೆ.

blank

ದಾವಣಗೆರೆ ಉತ್ತರ ಶೇ. 67.49, ದಾವಣಗೆರೆ ದಕ್ಷಿಣ – ಶೇ.66.32, ಮಾಯ ಕೊಂಡ – ಶೇ.83.89, ಹರಿಹರ, – ಶೇ. 79.78, ಹೊನ್ನಾಳಿ – ಶೇ. 83.78, ಚನ್ನಗಿರಿ ಶೇ. 81.94 ಹಾಗೂ ಜಗಳೂರಿನಲ್ಲಿ ಶೇ. 80.17 ರಷ್ಟು ಜನರು ಹಕ್ಕು ಚಲಾಯಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಶೇ. 75.59 ರಷ್ಟು ಮತದಾನ ದಾಖಲಾಗಿತ್ತು. ಈ ಬಾರಿ ಶೇ. 1.62 ರಷ್ಟು ಅಧಿಕ ಮತದಾನವಾಗಿದೆ. ಅಭ್ಯರ್ಥಿಗಳ ಹಣೆಬರಹ ಮತಯಂತ್ರಗಳಲ್ಲಿ ಭದ್ರವಾಗಿದ್ದು ಮೇ. 13 ರಂದು ಮತ ಎಣಿಕೆ ನಡೆಯಲಿದೆ.

ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಬುಧವಾರ ನೀರಸ ಆರಂಭ ಕಂಡ ಮತದಾನ ಪ್ರಕ್ರಿಯೆ ಮಧ್ಯಾಹ್ನದ ಹೊತ್ತಿಗೆ ಚುರುಕಾಗಿತ್ತು. ಬೆಳಗ್ಗೆ 10 ಗಂಟೆ ನಂತರದಲ್ಲಿ ಬಿಸಿಲಿನ ನಡುವೆಯೂ 1685 ಮತಗಟ್ಟೆಗಳಲ್ಲಿ ಮತದಾರರ ಉತ್ಸಾಹ ಕಂಡುಬಂದಿತು.

ಕೆಲವು ಸಾಮಾನ್ಯ ಮತಕೇಂದ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯೇ ಹೆಚ್ಚಿತ್ತು. ಆಕರ್ಷಕ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರು ಮತ ಹಾಕಿ ಸಂಭ್ರಮಿಸಿದರು. ಯುವ ಮತದಾರರು ಸರದಿ ಸಾಲಿನಲ್ಲಿ ನಿಂತು ಕುತೂಹಲದಿಂದ ಮತದಾನ ಮಾಡಿದರು.

ಕೆಲವು ಅಂಗವಿಕಲರು, ಹಿರಿಯ ನಾಗರಿಕರು ವ್ಹೀಲ್‌ಚೇರ್ ಆಸರೆಯಲ್ಲಿ ಬಂದರು. ವಯೋವೃದ್ಧರನ್ನು ಕುಟುಂಬ ಸದಸ್ಯರು ವಾಹನಗಳಲ್ಲಿ ಕರೆ ತಂದ ದೃಶ್ಯ ಕಂಡು ಬಂತು.

ಬೆಳಗ್ಗೆ 7 ರಿಂದ 9 ಗಂಟೆವರೆಗೆ ಜಿಲ್ಲಾದ್ಯಂತ ಶೇ.6.99 ರಷ್ಟು ಮತದಾನ ದಾಖಲಾಗಿತ್ತು. 11 ಗಂಟೆ ವೇಳೆಗೆ 20.78ರಷ್ಟಿದ್ದ ಮತ ಪ್ರಮಾಣ, 1 ಗಂಟೆ ಹೊತ್ತಿಗೆ 38.64ಕ್ಕೆ ತಲುಪಿತು.

ಸಂಜೆ 4.15ರ ಸುಮಾರಿಗೆ ಕೆಲವೆಡೆ ಮಳೆ ಸಿಂಚನವಾಯಿತು. ಮತಗಟ್ಟೆಗೆ ಬರಲು ಅಡ್ಡಿಯಾದರೂ ಸಂಜೆ 5 ಗಂಟೆ ಅಂತ್ಯಕ್ಕೆ ಶೇ.70.61 ರಷ್ಟು ಮತ ಮತಯಂತ್ರಗಳಲ್ಲಿ ದಾಖಲಾದವು. ಕಡೆಯ ಒಂದು ಗಂಟೆಯ ಅವಧಿಯಲ್ಲಿ ಮತದಾರರ ಉತ್ಸಾಹ ಹೆಚ್ಚಾಗಿದ್ದಂತೆ ಕಂಡು ಬಂದದ್ದು ವಿಶೇಷ.

ಆರಂಭದಿಂದಲೂ ನಾಗಾಲೋಟದಲ್ಲಿದ್ದ ಜಗಳೂರು ಕ್ಷೇತ್ರದಲ್ಲಿ ಒಟ್ಟಾರೆ ಶೇ.75.78ರಷ್ಟು ಮತ ಚಲಾವಣೆಯಾದರೆ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ (58.82) ಮತದಾನವಾಯಿತು.

ಯುವ ಹವಾ: ಚುನಾವಣಾ ಗುರುತಿನ ಚೀಟಿ, ಆಧಾರ್‌ಕಾರ್ಡ್ ಹಿಡಿದು ಮತಗಟ್ಟೆಗಳ ಬಳಿ ಯುವ ಮತದಾರರು ನಿಂತಿದ್ದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳಿಗಾಗಿ ಮತ ಮೀಸಲು ಎಂದು ಬಹುತೇಕರು ಹೇಳಿಕೊಂಡರು. ಅಣಜಿಯ ಮತಗಟ್ಟೆಯಲ್ಲಿ ಎಂಸಿಎ ವ್ಯಾಸಂಗ ಮಾಡುತ್ತಿರುವ ಎ.ಎಸ್. ಸ್ಫೂರ್ತಿ, ಇಂಜಿನಿಯರಿಂಗ್ ಓದುತ್ತಿರುವ ಸೋದರ .ಎಸ್. ರಂಜನ್ ಅವರೊಂದಿಗೆ ತೆರಳಿ ಮತದಾನ ಮಾಡಿ ಗಮನ ಸೆಳೆದರು.

ಮಾಯಕೊಂಡದ ಮತಕೇಂದ್ರದಲ್ಲಿ ಸೋದರಿಯರಾದ ಎಚ್. ರೇಖಾ- ದೀಪಾ ಮೊದಲ ಬಾರಿಗೆ ಹಕ್ಕು ಚಲಾಯಿಸಿದ ಖುಷಿ ಅನುಭವಿಸಿದರು. ತೊಂದರೆಯಲ್ಲಿರುವ ರೈತರು, ವಿದ್ಯಾರ್ಥಿಗಳಿಗೆ ಅನುಕೂಲತೆಗಳು ಸಿಗಬೇಕಿದೆ. ಉತ್ತಮ ಅಭ್ಯರ್ಥಿಗಳನ್ನು ಚುನಾಯಿಸುವ ಉದ್ದೇಶದಿಂದ ಮತದಾನ ಮಾಡಿದ ಬಗ್ಗೆ ಚಿತ್ರದುರ್ಗದಲ್ಲಿ ನರ್ಸಿಂಗ್ ಓದುತ್ತಿರುವ ರೇಖಾ ಹೇಳಿಕೊಂಡರು.

ಕೆಲವೆಡೆ ಯಂತ್ರಗಳ ಬದಲು: ಮತದಾನ ಸಂದರ್ಭದಲ್ಲಿ ಜಿಲ್ಲೆಯ ಕೆಲವೆಡೆ ಮತಯಂತ್ರಗಳನ್ನು ಬದಲಾವಣೆ ಮಾಡಲಾಯಿತು. ದಾವಣಗೆರೆ ದಕ್ಷಿಣ ಕ್ಷೇತ್ರದ ಮತಗಟ್ಟೆ ಸಂಖ್ಯೆ 31, 70, 76, 177, 209ರಲ್ಲಿ ವಿವಿ ಪ್ಯಾಟ್‌ನ ಚಿತ್ರಗಳು ಮಸುಕಾಗಿ ಕಾಣುತ್ತಿದ್ದರಿಂದ ತಕ್ಷಣ ಇಂಜಿನಿಯರ್‌ಗಳನ್ನು ಕರೆಸಿ ಯಂತ್ರಗಳ ಬದಲಾವಣೆ ಮಾಡಲಾಯಿತು.

ಹರಿಹರ ಕ್ಷೇತ್ರದಲ್ಲೂ 7 ವಿವಿ ಪ್ಯಾಟ್, 1 ಕಂಟ್ರೋಲ್ ಯುನಿಟ್, 1 ಬ್ಯಾಲೆಟ್ ಯುನಿಟ್ ಬದಲಾವಣೆ ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖರ ಮತದಾನ: ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಶಿವಶಂಕರಪ್ಪ, ಉತ್ತರ ಕ್ಷೇತ್ರದ ಕೈ ಅಭ್ಯರ್ಥಿ ಮಲ್ಲಿಕಾರ್ಜುನ್, ಪತ್ನಿ ಪ್ರಭಾ ಮಲ್ಲಿಕಾರ್ಜುನ್, ಮಕ್ಕಳಾದ ಸಮರ್ಥ, ಶ್ರೇಷ್ಠಾ ಅವರೊಂದಿಗೆ ಐಎಂಎ ಸಭಾಂಗಣದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ದಕ್ಷಿಣ ಕ್ಷೇತ್ರದ ಬಿಜೆಪಿ ಹುರಿಯಾಳು ಬಿ.ಜಿ. ಅಜಯಕುಮಾರ್ ಪತ್ನಿ ಮಂಗಳಾ, ಪುತ್ರಿ ಎ.ಜಿ. ನೇಹಾ, ಸಹೋದರಿ ವಾಣಿಶ್ರೀ ಫಣಿರಾಜ್ ಅವರೊಂದಿಗೆ ಬಕ್ಕೇಶ್ವರ ಶಾಲೆಯಲ್ಲಿ ಹಕ್ಕು ಚಲಾಯಿಸಿದರು. ಇದೇ ಕ್ಷೇತ್ರದ ಎಸ್‌ಯುಸಿಐ(ಸಿ) ಉಮೇದುವಾರ್ತಿ ಕೆ. ಭಾರತಿ ಮತ ಚಲಾಯಿಸಿದರು.

ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ವಿನಾಯಕ ಬಡಾವಣೆಯ ರಿಕ್ರಿಯೇಷನ್ ಕ್ಲಬ್‌ನ ಮತಗಟ್ಟೆಯಲ್ಲಿ ಪತ್ನಿ ಲತಾ ಅವರೊಂದಿಗೆ ಮತ ಹಾಕಿದರು. ಶಿರಮಗೊಂಡನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ ಸಂ.175ರಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ಮತದಾನ ಮಾಡಿದರು. ಬೆಂಗಳೂರಿನಿಂದ ಬಂದ ಎಂಎಲ್ಸಿ ತೇಜಸ್ವಿನಿ ಗೌಡ ನಗರದ ಮತಗಟ್ಟೆ ಸಂಖ್ಯೆ 227ರಲ್ಲಿ ಹಕ್ಕು ಚಲಾವಣೆ ಮಾಡಿದರು. ಕೊಗ್ಗನೂರಲ್ಲಿ ಮಾಯಕೊಂಡ ಜೆಡಿಎಸ್ ಅಭ್ಯರ್ಥಿ ಎಚ್.ಆನಂದಪ್ಪ ಪತ್ನಿ ಸಹಿತ ಮತ ಚಲಾಯಿಸಿದರು.

Share This Article
blank

ಮಳೆ ಬಂದಾಗ ಸ್ನಾನ ಮಾಡುವುದು ಅಪಾಯಕಾರಿ! ಮೊದಲು ಈ ಕುರಿತು ತಿಳಿದುಕೊಳ್ಳಿ… lifestyle

lifestyle : ಮಳೆ ಬಂದಾಗ   ಗುಡುಗು ಮತ್ತು ಮಿಂಚಿನೊಂದಿಗೆ ಬಂದರೆ, ನಾವು ಜಾಗರೂಕರಾಗಿರಬೇಕು. ಮಳೆ ಬರುತ್ತಿರುವಾಗ…

ಮಳೆಗಾಲದಲ್ಲಿ ಪಪ್ಪಾಯಿ ಉತ್ತಮ; ಈ ಹಣ್ಣಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲ ಪ್ರಯೋಜನ ಗೊತ್ತೇ? ಇಲ್ಲಿದೆ ಮಾಹಿತಿ | Papaya

Papaya Benefits: ನಾವು ತಿನ್ನುವ ಹಣ್ಣುಗಳಲ್ಲಿ ಪಪ್ಪಾಯಿ ಕೂಡ ಬಹಳ ವಿಶೇಷವಾದುದು. ಈ ಹಣ್ಣಿನ ಬಗ್ಗೆ…

blank