ಅಂಕ ಗಳಿಕೆಗೆ ಸೀಮಿತವಾದ ಶಿಕ್ಷಣ

ದಾವಣಗೆರೆ: ಶಿಕ್ಷಣದಲ್ಲಿ ಸಾಮಾನ್ಯ ಜ್ಞಾನ, ಜೀವನ ಕೌಶಲ ಬಿಟ್ಟು, ಅಂಕ ಗಳಿಕೆಗೆ ಸೀಮಿತಗೊಳಿಸಿರುವುದು ದುರಂತ ಎಂದು ಮನೋಶಾಸ್ತ್ರಜ್ಞೆ ಡಾ.ಪ್ರೀತಿ ಪೈ. ಶಾನಭಾಗ್ ಆತಂಕ ವ್ಯಕ್ತಪಡಿಸಿದರು.

ಕಲಾಕುಂಚ ಸಂಸ್ಥೆಯಿಂದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ಹಾಗೂ ಜಿಲ್ಲಾ ಮಟ್ಟದ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

18-28 ವರ್ಷ ವಯೋಮಾನದವರೇ ಆತ್ಮಹತ್ಯೆಗೆ ಶರಣಾಗುತ್ತಿರುವುದು ಸಂಶೋಧನೆ ಗಳಿಂದ ದೃಢಪಟ್ಟಿದೆ. ಪ್ರಸ್ತುತ ಶಿಕ್ಷಣ ಅಂಕ ಗಳಿಕೆ ಸಾಧನವಾಗಿದೆ. ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡ ಹೆಚ್ಚಾಗುತ್ತಿದ್ದು, ನಿಭಾಯಿಸಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದರು.

ಪ್ರಾಥಮಿಕ ಶಾಲೆಯಲ್ಲಿ ಕ್ರೀಡೆಗಳಿಗೆ ಅವಕಾಶವಿದ್ದು, ಪ್ರೌಢ ಶಾಲೆ ಹಂತಕ್ಕೆ ಸೀಮಿತಗೊಳ್ಳುತ್ತದೆ. ಕಾಲೇಜು ಅಧ್ಯಯನದಲ್ಲಿ ಕ್ರೀಡೆ ಮರೆಯಾಗಿ, ಅಂಕ ಗಳಿಗೆ ನಿರ್ದೇಶಿತರಾಗುತ್ತಾರೆ. ಪಾಲಕರು ಇದನ್ನೇ ಸರಿ ಎಂದು ಸಾಧಿಸುತ್ತಿರುವುದು ಆತಂಕದ ಸಂಗತಿ ಎಂದರು.

ಕ್ರೀಡೆ, ಸೃಜನಾತ್ಮಕ ಕಾರ್ಯಗಳಲ್ಲಿ ತೊಡಗುವುದರಿಂದ ಸಮಸ್ಥಿತಿಯಿಂದ ಸೋಲು ಸ್ವೀಕರಿಸುವ, ಸ್ಪರ್ಧಾತ್ಮಕ ಮನೋಭಾವ ಜಾಗೃತಗೊಳ್ಳುತ್ತದೆ. ಸವಾಲುಗಳನ್ನು ಎದುರಿಸುವ ಮನಸ್ಥಿತಿ ಗಟ್ಟಿಗೊಳ್ಳುತ್ತದೆ. ಸಮಸ್ಯೆಗೆ ಹಲವು ಬಗೆ ಪರಿಹಾರ ಮಾರ್ಗ ಶೋಧಿಸುವುದರಿಂದ ಸಂಶೋಧಕ ಪ್ರವೃತ್ತಿಗೆ ಪೋಷಣೆ ದೊರೆಯುತ್ತದೆ ಎಂದರು.

ಆಸೆಗೆ ತಕ್ಕಷ್ಟು ಅಧ್ಯಯನ, ಪರಿಶ್ರಮವಿಲ್ಲದೇ ನಿಗದಿ ಗುರಿ ಸಾಧನೆ ಸಾಧ್ಯವಿಲ್ಲ. ಪ್ರತಿ ಮಕ್ಕಳಲ್ಲೂ ವಿಶೇಷ ಸಾಮರ್ಥ್ಯವಿರುತ್ತದೆ. ಅದನ್ನು ಗುರುತಿಸಬೇಕಾದುದು ಪಾಲಕರ ಕರ್ತವ್ಯ. ಅನಗತ್ಯವಾಗಿ ಮಕ್ಕಳ ಮೇಲೆ ಒತ್ತಡ ಹೇರದೇ, ಅವರ ಪ್ರತಿಭೆ ಅರಳಲು ಅವಕಾಶ ನೀಡಬೇಕು ಎಂದು ಪಾಲಕರಿಗೆ ಕಿವಿಮಾತು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಅಂದ ವಿದ್ಯಾರ್ಥಿ ಅಭಿರಾಮ ಕೆ. ಭಾಗವತ್ ಸುಶ್ರಾವ್ಯವಾಗಿ ಕೊಳಲು ನುಡಿಸಿದರು. ಬಾಲ ಸರಸ್ವತಿ ಪ್ರಶಸ್ತಿ ಪುರಸ್ಕೃತೆ ಆಯನಾ ಕೆ. ರಮಣ್ ರಾಜ್ಯದ 223 ಸಾಹಿತಿಗಳ ಹೆಸರುಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಜ್ಞಾಪಕಶಕ್ತಿ ಸಾಮರ್ಥ್ಯ ಪ್ರದರ್ಶಿಸಿದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕನ್ನಡ ಕೌಸ್ತುಭ, ಸರಸ್ವತಿ ಪುರಸ್ಕಾರ ಹಾಗೂ ಕನ್ನಡ ಕುರವ-ಕುವರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಸಂಸ್ಥೆ ಅಧ್ಯಕ್ಷ ಕೆ.ಎಚ್.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಉಪಸ್ಥಿತರಿದ್ದರು.