ಒತ್ತಡಕ್ಕೆ ಸಿಲುಕಿದ ಜಿಲ್ಲಾಸ್ಪತ್ರೆ ತಜ್ಞ ವೈದ್ಯರು

ದಾವಣಗೆರೆ: ವಾರದಿಂದ ಜಿಲ್ಲಾಸ್ಪತ್ರೆ ಪ್ರತಿ ತಜ್ಞ ವೈದ್ಯರು ನಿತ್ಯ ಸರಾಸರಿ 343 ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಉದ್ಭವಿಸಿದ್ದು, ಒತ್ತಡ ಕ್ಕೆ ಸಿಲುಕಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ನಿತ್ಯ ಸರಾಸರಿ 1,560 ಹೊರರೋಗಿಗಳು, 1,511 ವ್ಯಕ್ತಿಗಳ ಪ್ರಯೋಗಾಲಯ ಪರೀಕ್ಷೆ, 123 ಒಳರೋಗಿಗಳು, 74 ಶಸ್ತ್ರ ಚಿಕಿತ್ಸೆಗಳು, 27 ಹೆರಿಗೆ, 94 ಕ್ಷಕಿರಣ, 36 ಅಲ್ಟ್ರಾಸೌಂಡ್, 18 ಡಯಾಲಿಸಿಸ್, 8 ಎಸ್‌ಎನ್‌ಯು, 3 ಐಸಿಯು ತಪಾಸಣೆ, ಚಿಕಿತ್ಸೆಗೆ ದಾಖಲಾಗುತ್ತಾರೆ.

930 ಹಾಸಿಗೆ, ವೆಂಟಲೇಟರ್ ವರೆಗೆ ಬಹು ಸೌಲಭ್ಯದ ಜಿಲ್ಲಾಸ್ಪತ್ರೆಗೆ 49 ತಜ್ಞ ವೈದ್ಯರ ಹುದ್ದೆ ಮಂಜೂರಾಗಿದ್ದು, 46 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇವಲ 46 ವೈದ್ಯರಿಂದ ಇಷ್ಟ್ಟೊಂದು ರೋಗಿಗಳಿಗೆ ಸಮರ್ಪಕ ಸೇವೆ ನೀಡುವುದು ಕಷ್ಟ. ವೈದ್ಯಕೀಯ ಕಾಲೇಜುಗಳ ಹೌಸ್ ಸರ್ಜನ್, ವೈದ್ಯಕೀಯ ಸ್ನಾತಕೋತ್ತರ ಅಧ್ಯಯನ ವಿದ್ಯಾರ್ಥಿಗಳ ಸೇವೆಯಿಂದ ವೈದ್ಯರ ಒತ್ತಡ ನಿರ್ವಹಣೆಯಾಗುತ್ತಿತ್ತು. ಈ ಸೇವೆಗೆ ಕಿರಿಯ ವೈದ್ಯರಿಗೆ ಶಿಷ್ಯವೇತನ ದೊರೆಯುತ್ತಿತ್ತು.

ಪ್ರಸ್ತುತ, 234 ಕಿರಿಯ ವೈದ್ಯರು ಸೇವೆ ಸಲ್ಲಿಸುತ್ತಿದ್ದು, ಫೆಬ್ರವರಿ ತಿಂಗಳಿಂದ ಕಿರಿಯ ವೈದ್ಯರಿಗೆ ಶಿಷ್ಯವೇತನ ಬಿಡುಗಡೆಯಾಗಿಲ್ಲ. ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ, ಪ್ರತಿಫಲ ದೊರೆಯದ ಹಿನ್ನೆಲೆಯಲ್ಲಿ ವೈದ್ಯರು ಕಳೆದ 6 ದಿನಗಳಿಂದ ಅನಿರ್ದಿಷ್ಟ ಕಾಲದ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲಾಸ್ಪತ್ರೆ ರೋಗಿಗಳು ಸೂಕ್ತ ಸೇವೆ ದೊರೆಯದೇ ಪರದಾಡುತ್ತಿದ್ದಾರೆ. ರೋಗಿಗಳ ನಿರ್ವಹಿಸಲಾಗದ ವೈದ್ಯರು ಒತ್ತಡಕ್ಕೆ ಸಿಲುಕುತ್ತಿದ್ದು, ಅವರ ತಾಳ್ಮೆ ಕಟ್ಟೆ ಒಡೆಯವ ಹಂತದಲ್ಲಿದೆ.

ಕಿರಿಯ ವೈದ್ಯರು ನಿತ್ಯವೂ ವಿನೂತನ ಪ್ರತಿಭಟನೆಯಿಂದ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಸಮಸ್ಯೆಗಳ ಅರಿವಿದ್ದರೂ, ಸರ್ಕಾರ ನಿರ್ಧಾರ ಪ್ರಕಟಿಸದಿರುವ ಕಾರಣ ಪ್ರತಿಭಟನಾಕಾರರ ಪಟ್ಟು ಇನ್ನಷ್ಟು ಗಟ್ಟಿಯಾಗುತ್ತಿದೆ. ಕಿರಿಯ ವೈದ್ಯರ ಸಂಘರ್ಷದಲ್ಲಿ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಕೂಡಲೇ, ಪರಿಹಾರ ಮಾರ್ಗ ಸರ್ಕಾರ ರೂಪಿಸಬೇಕೆಂಬುದು ರೋಗಿಗಳ ಆಗ್ರಹ.