More

  ಲೋಕ ಅದಾಲತ್‌ನಲ್ಲಿ ಒಂದಾದ 8 ದಂಪತಿಗಳು

  ದಾವಣಗೆರೆ: ವಿವಿಧ ಕಾರಣಗಳಿಂದ ದೂರವಾಗಿದ್ದ 8 ದಂಪತಿಗಳು, ಲೋಕ ಅದಾಲತ್ ಅಂಗವಾಗಿ ನಗರದ ಕೌಟುಂಬಿಕ ನ್ಯಾಯಾಲಯದಲ್ಲಿ ಶನಿವಾರ ನಡೆದ ರಾಜಿ ಸಂಧಾನದಲ್ಲಿ ಒಂದಾದರು.
   ಕೌಟುಂಬಿಕ ಸಮಸ್ಯೆ, ವೈಚಾರಿಕ ಭಿನ್ನಾಭಿಪ್ರಾಯ, ಹೊಂದಾಣಿಕೆ ಕೊರತೆ ಇನ್ನಿತರ ಕಾರಣಗಳಿಂದ ಅವರು ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದರು. ಈ ಹಂತದಲ್ಲಿ ಚಿಂತನೆ ಬದಲಿಸಿ ಮತ್ತೆ ಜತೆಯಾಗಿ ಬದುಕು ಕಟ್ಟಿಕೊಳ್ಳುವ ಸಂಕಲ್ಪ ಮಾಡಿದರು.
   ಲೋಕ ಅದಾಲತ್ ಮುಂದೆ ವಿವಾಹ ವಿಚ್ಛೇದನ, ಜೀವನಾಂಶದ ಅನೇಕ ಪ್ರಕರಣಗಳು ಬಂದವು. ನ್ಯಾಯಾಧೀಶರ ಮುಂದೆ ಹಾಜರಾದಾಗ ಜತೆಗೆ ಪುಟ್ಟ ಮಕ್ಕಳನ್ನೂ ಕರೆತಂದಿದ್ದರು. ಕೆಲವರು ಕಣ್ಣೀರಿಟ್ಟರು, ತಮ್ಮ ಕತೆಯನ್ನು ಹೇಳಿಕೊಂಡರು. ಜತೆಯಾಗಿ ಬಾಳಲು ಇಷ್ಟವಿಲ್ಲ ಎಂದು ಕೆಲವರು ಹೇಳಿಕೊಂಡರು. ಜೀವನಾಂಶಕ್ಕಾಗಿ ಬೇಡಿಕೆಯಿಟ್ಟರು.
   ಪ್ರತಿಯೊಂದು ಪ್ರಕರಣದ ಮಾಹಿತಿ ಪಡೆದ ನ್ಯಾಯಾಧೀಶರು ಆ ಜೋಡಿಗಳೊಂದಿಗೆ ಮಾತನಾಡಿದರು. ಯಾವ ಕಾರಣಕ್ಕೆ ದೂರವಿದ್ದೀರಿ, ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಹೋಗಿ. ಮುದ್ದಾದ ಮಕ್ಕಳಿದ್ದಾರೆ, ಅವರ ಭವಿಷ್ಯಕ್ಕಾಗಿಯಾದರೂ ನೀವು ಒಂದಾಗಬೇಕು ಎಂದು ಮನವರಿಕೆ ಮಾಡಲು ಪ್ರಯತ್ನಿಸಿದರು.
   ಕೆಲವು ಪ್ರಕರಣಗಳಲ್ಲಿ ಒಂದೆರಡು ತಿಂಗಳ ಮಟ್ಟಿಗಾದರೂ ಒಟ್ಟಿಗೇ ಜೀವನ ಮಾಡಿ. ಆಗ ಎಲ್ಲವೂ ಸರಿ ಹೋಗಬಹುದು ಎಂದು ಸಲಹೆ ನೀಡಿದರು. ಆದರೂ ರಾಜಿಯಾಗುವ ಲಕ್ಷಣ ಕಂಡುಬರದೇ ಇದ್ದಾಗ ಮುಂದಿನ ವಿಚಾರಣೆಗಾಗಿ ದಿನಾಂಕ ನಿಗದಿ ಮಾಡಿದರು. ಕೆಲವು ಪ್ರಕರಣಗಳಲ್ಲಿ ಜೀವನಾಂಶ ಮೊತ್ತವನ್ನು ನಿಗದಿಪಡಿಸಲಾಯಿತು.
   ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಬಿ. ದಶರಥ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಕಾರ್ಯದರ್ಶಿ ಎಸ್. ಬಸವರಾಜ, ಉಪಾಧ್ಯಕ್ಷ ಜಿ.ಕೆ. ಬಸವರಾಜ, ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್, ಸಂಧಾನಕಾರ್ತಿ ಭಾಗ್ಯಾ, ವಕೀಲರು ಇದ್ದರು.
   …
   
   (ಬಾಕ್ಸ್)
   40 ವರ್ಷ ಹಳೆಯ ಪ್ರಕರಣ ಇತ್ಯರ್ಥ
   ನಗರದ ಎಸ್.ಎಸ್. ಬಡಾವಣೆಯ ನಿರ್ಮಾಣಕ್ಕೆ ನಡೆದಿದ್ದ ಭೂಸ್ವಾಧೀನದ ಪರಿಹಾರ ಪ್ರಕರಣವನ್ನು ಪ್ರಸ್ತುತ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಕರಣ್ಣವರ ತಿಳಿಸಿದರು.
   ಸುದ್ದಿಗಾರರೊಂದಿಗೆ ಮಾತನಾಡಿ, 1985 ರಲ್ಲಿ ಬಡಾವಣೆಯ ನಿರ್ಮಾಣಕ್ಕಾಗಿ ರೈತರ ಜಮೀನುಗಳನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಆಗ ನೀಡಿದ್ದ ಪರಿಹಾರ ಸಮಂಜಸವಾಗಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಈ ವಿಚಾರ ಸುಪ್ರೀಂ ಕೋರ್ಟ್ ವರೆಗೂ ಹೋಗಿತ್ತು ಎಂದು ಮಾಹಿತಿ ನೀಡಿದರು.
   ಕೆಪಿಟಿಸಿಎಲ್‌ನಿಂದ ಮುಖ್ಯ ವಿದ್ಯುತ್ ಮಾರ್ಗಗಳನ್ನು ಎಳೆಯುವಾಗ ರೈತರ ಬೆಳೆ ಹಾನಿ, ವಿದ್ಯುತ್ ಕಂಬಗಳನ್ನು ಹಾಕುವಾಗ ಜಮೀನುಗಳಿಗೆ ಆಗಿರುವ ನಷ್ಟ ಇತ್ಯಾದಿ ವಿಚಾರಗಳ ಸಂಬಂಧ 52 ಪ್ರಕರಣಗಳು ಲೋಕ ಅದಾಲತ್‌ನಲ್ಲಿ ರಾಜಿಯಾಗಿದ್ದು 16 ಲಕ್ಷ ರೂ. ಪರಿಹಾರ ನೀಡಲಾಗಿದೆ. 1.30 ಲಕ್ಷಕ್ಕೂ ಹೆಚ್ಚು ವ್ಯಾಜ್ಯಪೂರ್ವ ಪ್ರಕರಣಗಳನ್ನು ಕಳೆದ 2 ತಿಂಗಳಲ್ಲಿ ಬಗೆಹರಿಸಲಾಗಿದೆ ಎಂದು ಹೇಳಿದರು.
   ಈ ಹಿಂದೆ ನಡೆದ ಲೋಕ ಅದಾಲತ್‌ನಲ್ಲಿ ಒಳ್ಳೆಯ ಪ್ರಕರಣಗಳನ್ನು ರಾಜಿ ಮಾಡಿದ್ದಕ್ಕಾಗಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ದಾವಣಗೆರೆ ಜಿಲ್ಲೆಗೆ ಪ್ರಶಂಸಾ ಪತ್ರ ಬಂದಿದೆ ಎಂದು ತಿಳಿಸಿದರು.
   

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts