ದಾವಣಗೆರೆ : ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದಾಗಿ ರಾಜ್ಯದಲ್ಲಿ 1 ಕೋಟಿ ಜನರು ಬಡತನ ರೇಖೆಗಿಂತ ಮೇಲೆ ಬಂದಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು. ಜಿಲ್ಲಾ ಕಾಂಗ್ರೆಸ್ ವೀಕ್ಷಕರೂ ಆಗಿರುವ ಅವರು ಪಕ್ಷದ ಜಿಲ್ಲಾ ಕಚೇರಿಯಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಪಂಚ ಗ್ಯಾರಂಟಿಗಳು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಿವೆ. ಗೃಹಲಕ್ಷ್ಮೀ ಯೋಜನೆಯಡಿ ವರ್ಷಕ್ಕೆ 24 ಸಾವಿರ ರೂ. ಬರುತ್ತಿದ್ದು ಆ ಹಣದಲ್ಲಿ ಮಕ್ಕಳ ಶಿಕ್ಷಣ, ಕೃಷಿ ಇನ್ನಿತರ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆಗಳಿಗಾಗಿ 52 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇದು ಇಡೀ ದೇಶಕ್ಕೇ ಮಾದರಿಯಾಗಿದೆ. ಇಂಥ ಉಪಯುಕ್ತ ಯೋಜನೆಯ ಬಗ್ಗೆ ವಿಪಕ್ಷಗಳು ಟೀಕಿಸಿದ್ದವು ಎಂದು ನೆನಪಿಸಿದರು. ಗ್ಯಾರಂಟಿ ಯೋಜನೆಗಳ ಜತೆಗೆ ಅಭಿವೃದ್ಧಿಯನ್ನೂ ಮಾಡುತ್ತಿದ್ದೇವೆ. ಅರಣ್ಯ ಒತ್ತುವರಿ ತೆರವು, ಪರಿಸರ ಹಾಗೂ ವನ್ಯಜೀವಿಗಳ ರಕ್ಷಣೆಯಂಥ ವಿಷಯಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಮ್ಮ ಇಲಾಖೆಯ ಸಾಧನೆಯ ಬಗ್ಗೆ ಪ್ರಸ್ತಾಪಿಸಿದರು. ರಾಜ್ಯದ 3500 ತಾಂಡಾ, ಹಾಡಿ, ಹಟ್ಟಿಗಳಲ್ಲಿ ಸಮೀಕ್ಷೆ ನಡೆಸಿ, ಸರ್ಕಾರಿ ಜಮೀನುಗಳಲ್ಲಿ ವಾಸವಿರುವ ಬಡವರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರ ನೀಡಲಾಗುತ್ತಿದೆ. ಡಿಜಿಟಲ್ ಹಕ್ಕುಪತ್ರದ ಜತೆಗೆ ಇ-ಸ್ವತ್ತು ದೊರೆಯುವಂತೆ ಮಾಡಿದ್ದೇವೆ. 1 ಲಕ್ಷ ಜನರಿಗೆ ಇದರಿಂದ ಅನುಕೂಲವಾಗಲಿದೆ. ಈ ಯೋಜನೆ ದೇಶದಲ್ಲೇ ಪ್ರಥಮವಾಗಿದೆ ಎಂದು ತಿಳಿಸಿದರು. ಮೇ 20 ರಂದು ಹೊಸಪೇಟೆಯಲ್ಲಿ ಸರ್ಕಾರದ 2 ವರ್ಷಗಳ ಸಾಧನೆಯ ಸಮಾರಂಭ ಆಯೋಜಿಸಲಾಗಿದೆ. 2 ಲಕ್ಷಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಇನ್ನಿತರ ಗಣ್ಯರು, ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದರು. ಈ ಸಮಾರಂಭಕ್ಕೆ ದಾವಣಗೆರೆ ಜಿಲ್ಲೆಯಿಂದ ಹೆಚ್ಚು ಸಂಖ್ಯೆಯಲ್ಲಿ ಕಾರ್ಯಕರ್ತರು ಬರಬೇಕು ಎಂದು ಆಹ್ವಾನ ನೀಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ನಮ್ಮದು ನುಡಿದಂತೆ ನಡೆದ ಸರ್ಕಾರವಾಗಿದೆ. 2 ವರ್ಷಗಳ ಸಾಧನೆಯ ಸಮಾವೇಶವನ್ನು ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದು ಜಿಲ್ಲೆಯಿಂದ 5 ರಿಂದ 10 ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
