ವಿದ್ಯಾರ್ಥಿಗಳಲ್ಲಿ ಬಹುಮುಖಿ ಪ್ರತಿಭೆ ಅತ್ಯವಶ್ಯ

ದಾವಣಗೆರೆ: ಇಂದಿನ ಸ್ಪರ್ಧಾತ್ಮಕ ಕಾಲಕ್ಕೆ ತಕ್ಕಂತೆ ವಿದ್ಯಾರ್ಥಿಗಳಲ್ಲಿ ಬಹುಮುಖ ಪ್ರತಿಭೆಗಳಿರಬೇಕಾದ್ದು ಅತ್ಯವಶ್ಯ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ದಾವಣಗೆರೆ ಲಯನ್ಸ್ ಕ್ಲಬ್ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಸಾಧಕ ಮಕ್ಕಳಿಗೆ ‘ಕನ್ನಡ ಜ್ಞಾನರತ್ನ ಸಿರಿ’ ಪ್ರಶಸ್ತಿ ಪ್ರದಾನ ಸಾಮರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರೈತರು ಸುಸ್ಥಿರತೆಗಾಗಿ ಬಹುಬೆಳೆ ಬೆಳೆಯುತ್ತಾರೆ. ಅದೇ ರೀತಿಯಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲೇ ಫೋಟೋಗ್ರಫಿ, ವೀಡಿಯೋಗ್ರಫಿ, ಸಂಗೀತ, ಚಿತ್ರಕಲೆ ಮೊದಲಾದ ಬಹುರೂಪಿ ಕೌಶಲಗಳನ್ನು ರೂಢಿಸಿಕೊಳ್ಳಬೇಕು. ಕಂಪ್ಯೂಟರ್ ಕಲಿಕೆ, ಸಾಹಸ ಪ್ರವೃತ್ತಿ, ಅನ್ವೇಷಕ ಗುಣಗಳಿರಬೇಕು ಎಂದರು.

ಹಿಂದಿನಂತೆ ಎಸ್ಸೆಸ್ಸೆಲ್ಸಿ ಓದಿದರೆ ಕೆಲಸ ಸಿಗುತ್ತದೆಂಬ ಕಾಲ ಈಗಿಲ್ಲ. ಇದಕ್ಕೆ ತರಬೇತಿ, ತಯಾರಿಗಳು ಬೇಕು. ಬುದ್ಧಿಮತ್ತೆ ಹೆಚ್ಚಿಸಿಕೊಳ್ಳಬೇಕು. ಆಗ ಹುದ್ದೆಗಳು ಹುಡುಕಿಬರಲಿವೆ. ಬಹುಮುಖಿ ಸಾಧಕರಿಗೆ ಉಜ್ವಲ ಭವಿಷ್ಯವಿದೆ ಎಂದರು.

ಬಹುಮುಖಿ ಕೌಶಲಗಳಿಲ್ಲದಿದ್ದರೆ ಆಧುನಿಕ ಕಾಲದಲ್ಲಿ ಸ್ವಾಮೀಜಿ ಆಗಲೂ ಸಹ ಸಾಧ್ಯವಿಲ್ಲ. ಬಹುಮುಖಿ ಕ್ರಿಯಾಸಾಧನೆಯಿಂದ ಬದುಕು ಪರಿಪೂರ್ಣವಾಗಲಿದೆ ಎಂದರು.

ಈಶ್ವರೀಯ ವಿವಿ ರಾಜಯೋಗಿನಿ ಬ್ರಹ್ಮಕುಮಾರಿ ಲೀಲಾಜಿ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲೂ ಉತ್ತಮ ಅಂಕ ಪಡೆಯಬೇಕು. ವಿದ್ಯೆ ಜತೆಗೆ ಇರಬೇಕಾದ ವಿನಯ, ವಿಚಾರವಂತಿಕೆ ಇಂದಿನ ವಿದ್ಯಾರ್ಥಿಗಳಲ್ಲೂ ಕಂಡುಬರುತ್ತಿಲ್ಲ ಎಂದು ವಿಷಾದಿಸಿದರು.

ಶಿಕ್ಷಿತರಲ್ಲೇ ಮಾನವೀಯತೆ ಇಲ್ಲವಾಗಿದೆ. ಶಾಲೆಗಳಲ್ಲಿ ಮೌಲ್ಯ, ಚಾರಿತ್ರಿಕ ಶಿಕ್ಷಣ ಕಲಿಸಬೇಕಾದ ತರಗತಿ ಅವಧಿಗಳೆಲ್ಲಾ ಪಠ್ಯಕ್ಕೆ ಸೀಮಿತವಾಗಿವೆ. ಇದರಿಂದಾಗಿ ಶಿಕ್ಷಕರು, ವಿದ್ಯಾರ್ಥಿಗಳ ಸ್ಥಿತಿ ಇನ್ನಷ್ಟು ಅಧೋಗತಿಗೆ ಹೋಗಿದೆ. ಮಕ್ಕಳ ಎದುರು ಪಾಲಕರು ಮತ್ತು ಶಿಕ್ಷಕರ ಉತ್ತಮ ವರ್ತನೆ ಮುಖ್ಯ ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ ಅನಾರೋಗ್ಯ ಪೀಡಿತನಾಗಿದ್ದ ಬಾಲಕ ಒ.ಜೆ.ಸಿಮ್‌ಸನ್, ಉನ್ನತ ಗುರಿ ಬೆಳೆಸಿಕೊಂಡು ತಾನೂ ಫುಟ್‌ಬಾಲ್ ಆಟಗಾರ ವಿಲ್ಸನ್‌ನ ದಾಖಲೆಗಳನ್ನು ಮುರಿದು ಪ್ರಖ್ಯಾತಿ ಗಳಿಸಿದ. ಈಗಿನ ಮಕ್ಕಳಲ್ಲಿ ಇಂತಹ ದೊಡ್ಡ ಕನಸು, ಗುರಿಗಳಿರಬೇಕು. ಕಾಲಕ್ಕೆ ಮಹತ್ವ ನೀಡಬೇಕು ಎಂದರು.

ಎಸ್ಸೆಸ್ಸೆಲ್ಸಿಯ ಕನ್ನಡ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 57 ಮಕ್ಕಳ ಪೈಕಿ 23 ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕೋದ್ಯಮಿ ಎಂ.ಎಸ್. ವಿಕಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಲಯನ್ಸ್ ಮಾಜಿ ರಾಜ್ಯಪಾಲ ಜಿ. ನಾಗನೂರು, ಡಾ.ಬಿ.ಎಸ್.ನಾಗಪ್ರಕಾಶ್, ಪದ್ಮಾ ನಾಗಪ್ರಕಾಶ್, ವಲಯಾಧ್ಯಕ್ಷ ಇ.ಎಂ. ಮಂಜುನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಸ್. ಪ್ರತಾಪ್, ಸುರಭಿ ಶಿವಮೂರ್ತಿ ಇದ್ದರು.