More

  ಬದುಕಿನಲಿ ಧೈರ್ಯವಿರಲಿ, ಶ್ರೇಷ್ಠತೆಯ ಗುರಿ ಇರಲಿ

  ದಾವಣಗೆರೆ : ಜೀವನದಲ್ಲಿ ಯಾವುದೇ ಪರಿಸ್ಥಿತಿ ಬಂದರೂ ಧೈರ್ಯದಿಂದ ಎದುರಿಸಬೇಕು. ನಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಶ್ರೇಷ್ಠತೆಯನ್ನು ಸಾಧಿಸಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕುಲಸಚಿವೆ (ಆಡಳಿತ) ಬಿ.ಬಿ. ಸರೋಜಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
   ನಗರದ ಎಸ್.ಬಿ.ಸಿ ಕಾಲೇಜು ಹಾಗೂ ಅಥಣಿ ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜು ಆವರಣದಲ್ಲಿ ಬುಧವಾರ ಆಯೋಜಿಸಿದ್ದ, 2023-24ನೇ ಸಾಲಿನ ವಿದ್ಯಾರ್ಥಿ ಸಂಘ, ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್ ಹಾಗೂ ರೆಡ್‌ಕ್ರಾಸ್ ಘಟಕಗಳ ಉದ್ಘಾಟನೆ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು.
   ಬದುಕಿನಲ್ಲಿ ಹಲವು ತಿರುವುಗಳು ಬಂದರೂ ಎದೆಗುಂದದೇ ಮುನ್ನುಗ್ಗಬೇಕು. ಇರುವುದೊಂದೇ ಜೀವನವಾಗಿದ್ದು ಆತ್ಮಹತ್ಯೆಯಂಥ ಮಾರ್ಗಕ್ಕೆ ಇಳಿಯಬಾರದು. ಗಾಸಿಪ್‌ಗಳಿಗೆ ಕಿವಿಗೊಡದೇ ಗುರಿಯತ್ತಲೇ ಸಂಪೂರ್ಣ ಗಮನ ಇರಲಿ ಎಂದು ತಿಳಿಸಿದರು.
   ಕಷ್ಟಪಟ್ಟು ಓದಬೇಕು, ಕಷ್ಟದ ಸಂದರ್ಭದಲ್ಲಿ ಅದು ನಮಗೆ ಬೆಳಕು ತೋರುತ್ತದೆ. ಪರೀಕ್ಷಾ ಕೇಂದ್ರಕ್ಕೆ ಧೈರ್ಯವಾಗಿ ಹೋಗಬೇಕು. ನನ್ನಿಂದ ಸಾಧ್ಯ ಎನ್ನುವ ಆತ್ಮವಿಶ್ವಾಸವಿರಲಿ. ಅವಕಾಶಗಳು ಸಾಕಷ್ಟಿವೆ, ಅವುಗಳನ್ನು ಬಳಸಿಕೊಂಡು ಬೆಳೆಯಬೇಕು ಎಂದು ಸಲಹೆ ನೀಡಿದರು.
   ಕಳೆದ ನಾಲ್ಕು ದಶಕಗಳಲ್ಲಿ ಮಹಿಳೆಯರು ಶಿಕ್ಷಣ ಪಡೆಯುವ ಪ್ರಮಾಣ 4 ಪಟ್ಟು ಹೆಚ್ಚಾಗಿದೆ. ಇದರಿಂದ ಸಮಾಜಕ್ಕೆ ಕೊಡುಗೆ ಸಿಗುವಂತಾಗಬೇಕು. ಸ್ತ್ರೀಯರು ಆರ್ಥಿಕ ಸ್ವಾವಲಂಬನೆಯ ಜತೆಗೆ ಕುಟುಂಬದ ಒಳಿತಿಗೆ ಪ್ರಯತ್ನಿಸಬೇಕು ಎಂದರು.
   ಕನ್ನಡ ನಾಡು ಸಾಕಷ್ಟು ಪ್ರಗತಿ ಸಾಧಿಸಿದೆ. ಇತ್ತೀಚೆಗೆ ನಮ್ಮ ವಿಜ್ಞಾನಿಗಳು ಚಂದ್ರಯಾನದಲ್ಲಿ ಯಶಸ್ಸು ಕಂಡಿದ್ದಾರೆ. ಮಾಹಿತಿ ತಂತಜ್ಞಾನದಲ್ಲಿ ದೇಶದ ಶೇ. 40ರಷ್ಟು ರಫ್ತು ಬೆಂಗಳೂರಿನಿಂದಲೇ ಆಗುತ್ತದೆ. ಕನ್ನಡಿಗರು ಹೆಮ್ಮೆಪಡಲು ಇಂಥ ಹಲವು ಸಾಧನೆಗಳಿವೆ ಎಂದು ಹೇಳಿದರು.
   ಶೈಕ್ಷಣಿಕ ಅವಧಿಯಲ್ಲಿ ವ್ಯತ್ಯಾಸಗಳಾಗಿರುವುದು ಸರ್ಕಾರದ ಗಮನದಲ್ಲೂ ಇದೆ. ಕರೊನಾ ಪೂರ್ವದಲ್ಲಿ ಇದ್ದಂತೆ ಮಾಡುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
   ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಪ್ರಾಚಾರ್ಯ ಡಾ. ಎಂ. ಮಂಜಣ್ಣ ಮಾತನಾಡಿ, ಕನ್ನಡ ಎಲ್ಲರ ಭಾಷೆಯಾಗಿದೆ. ಜನಾಭಿಪ್ರಾಯದ ಆಧಾರದ ಮೇಲೆ ಕರ್ನಾಟಕ ಎಂಬ ಹೆಸರು ಬಂದಿದೆ. ಕನ್ನಡವೆಂದರೆ ಭಾಷೆ ಮಾತ್ರವಲ್ಲ, ಕನ್ನಡಿಗರದ ಬದುಕು ಉಳಿದರೆ ಕನ್ನಡವೂ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
   ಕನ್ನಡ ಕರುಳಿನ ಭಾಷೆಯಾಗಬೇಕು. ಎಲ್ಲ ಭಾಷೆಗಳನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮ ಭಾಷೆಗಿದೆ. ಕನ್ನಡದ ಅವಸಾನ ಆಗುವುದಿಲ್ಲ, ಜನರು ಅದನ್ನು ಉಳಿಸಬೇಕು ಎಂದು ತಿಳಿಸಿದರು.
   ಎಸ್‌ಬಿಸಿ ಕಾಲೇಜು ಪ್ರಾಚಾರ್ಯ ಡಾ. ಕೆ. ಷಣ್ಮುಖ ಪ್ರಾಸ್ತಾವಿಕ ಮಾತನಾಡಿ, ಕಾಲೇಜು ವರ್ಷದಿಂದ ವರ್ಷಕ್ಕೆ ಪ್ರಗತಿ ಕಾಣುತ್ತಿದೆ. ಹಲವು ರ‌್ಯಾಂಕುಗಳು ಬಂದಿವೆ. ಕ್ರೀಡಾ ಕ್ಷೇತ್ರದಲ್ಲೂ ಸಾಧನೆಗಳಾಗಿವೆ ಎಂದು ಮಾಹಿತಿ ನೀಡಿದರು.
   ಕಾಲೇಜು ಅಧ್ಯಕ್ಷ ಬಿ.ಸಿ. ಉಮಾಪತಿ, ಟ್ರಸ್ಟಿಗಳಾದ ಎಸ್.ಕೆ. ವೀರಣ್ಣ, ಕೆ.ಜಿ. ಸುಗಂಧರಾಜ್, ಬಿ.ಎಸ್. ಚನ್ನಬಸಪ್ಪ ಕಾಲೇಜು ಪ್ರಾಚಾರ್ಯ ಎಂ.ಸಿ. ಗುರು, ಪಿಯುಸಿ ಕಾಲೇಜು ಪ್ರಾಚಾರ್ಯೆ ಡಯಾನಾ ದಿವ್ಯಾ ಇದ್ದರು. ರ‌್ಯಾಂಕ್ ವಿಜೇತರಿಗೆ ಸನ್ಮಾನ ಮಾಡಲಾಯಿತು. ವಿದ್ಯಾರ್ಥಿನಿಯರಾದ ಶಾಂಭವಿ ಮತ್ತು ಲಕ್ಷ್ಮೀ ಪ್ರಾರ್ಥಿಸಿದರು. ಉಷಾ ಸ್ವಾಗತಿಸಿದರು. ಶ್ವೇತಾ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts