ದಾವಣಗೆರೆ : ಪೌರಕಾರ್ಮಿಕರ ಅಭಿವೃದ್ಧಿಗೆ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಬದ್ಧವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಹೇಳಿದರು.
ಮಹಾನಗರ ಪಾಲಿಕೆ ವತಿಯಿಂದ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈನಿಕರು ಗಡಿ ಕಾಯುವ ಮೂಲಕ ದೇಶವನ್ನು ರಕ್ಷಿಸುತ್ತಾರೆ. ಸಮಾಜದ ಸ್ವಾಸ್ಥೃ ಕಾಪಾಡುವ ಪೌರಕಾರ್ಮಿಕರು ಸ್ವಚ್ಛತೆಯ ಸೇನಾನಿಗಳಾಗಿದ್ದಾರೆ. ಅವರ ಯಾವುದೇ ವಿಚಾರಗಳನ್ನು ಜಿಲ್ಲಾಡಳಿತ ಸಂವೇದನಾಶೀಲವಾಗಿ ನೋಡಲಿದೆ ಎಂದು ತಿಳಿಸಿದರು.
ಪೌರಕಾರ್ಮಿಕರು ಊರಿನ ಕಸ ಇನ್ನಿತರ ಕೊಳಕನ್ನು ಸ್ವಚ್ಛ ಮಾಡುತ್ತಾರೆ. ಕರೊನಾ ಸಂದರ್ಭದಲ್ಲಂತೂ ಅವರು ಸಲ್ಲಿಸಿದ ಸೇವೆ ಮಹತ್ವದ್ದಾಗಿತ್ತು. ಅವರು ಕೆಲಸ ಮಾಡುವಾಗ ಹಲವು ಸೋಂಕುಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಪೌಷ್ಟಿಕ ಆಹಾರ ಸೇವಿಸಬೇಕು. ವ್ಯಸನಮುಕ್ತ ಆಗಿರಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ 381 ಮನೆಗಳನ್ನು ಪೌರಕಾರ್ಮಿಕರಿಗೆ ನೀಡಿದ್ದು ಬೇರೆ ಜಿಲ್ಲೆಗಳಲ್ಲಿ ಇಷ್ಟು ಸಂಖ್ಯೆಯ ಮನೆಗಳನ್ನು ಕೊಟ್ಟ ಉದಾಹರಣೆ ಇಲ್ಲ ಎಂದರು. ಪೌರಕಾರ್ಮಿಕರು ಆಯುಷ್ಮಾನ್ ಭಾರತ್, ಜೀವನ್‌ಜ್ಯೋತಿ ಬಿಮಾ ಇನ್ನಿತರ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದು ತಿಳಿಸಿದರು.
ಪ್ರತಿಪಕ್ಷ ನಾಯಕ ಕೆ. ಪ್ರಸನ್ನಕುಮಾರ್ ಮಾತನಾಡಿ, ಬಿಜೆಪಿ ಆಡಳಿತ ಅವಧಿಯಲ್ಲಿ ಪೌರಕಾರ್ಮಿಕರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಯಿತು. ಆಗ ಸರ್ಕಾರದಿಂದ ಬಂದ ವಿಶೇಷ ಅನುದಾನದಲ್ಲಿ ಗೃಹಭಾಗ್ಯ ಯೋಜನೆಗೆ ಹಣವನ್ನು ಕಾಯ್ದಿರಿಸಲಾಯಿತು ಎಂದು ಹೇಳಿದರು.
ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ 11 ಸಾವಿರ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡಲಾಯಿತು. ಆಗ ದಾವಣಗೆರೆಯಲ್ಲಿ 107 ಪೌರಕಾರ್ಮಿಕರಿಗೆ ಅದರ ಪ್ರಯೋಜನ ದೊರೆಯಿತು. 10 ಜನ ಪೌರಕಾರ್ಮಿಕರನ್ನು ಸಿಂಗಾಪುರ ಪ್ರವಾಸಕ್ಕೆ ಕಳಿಸಲಾಯಿತು. ವೇತನ ಪಾವತಿ ಸಮರ್ಪಕವಾಗಿ ಆಗುವಂತೆ ನೋಡಿಕೊಂಡಿದ್ದೇವೆ ಎಂದು ತಿಳಿಸಿದರು.
ಪಾಲಿಕೆಯ ಪ್ರತಿ ವಾರ್ಡ್‌ನಲ್ಲೂ ಪೌರಕಾರ್ಮಿಕರ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಬೇಕು. 3 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಎಂದು ಆಗ್ರಹಿಸಿದರು.
ಪಾಲಿಕೆಯ ಕಾಂಗ್ರೆಸ್ ಸದಸ್ಯ ಚಮನ್‌ಸಾಬ್ ಮಾತನಾಡಿ, ಪೌರಕಾರ್ಮಿಕರಿಗಾಗಿ ಗುಣಮಟ್ಟದ ಮನೆಗಳನ್ನು ನಿರ್ಮಿಸಲಾಗಿದೆ. ಆ ರೀತಿಯ ಇನ್ನೂ ಒಂದೆರಡು ಸಮುಚ್ಚಯಗಳ ಅಗತ್ಯವಿದೆ ಎಂದು ತಿಳಿಸಿದರು.
ಪೌರ ಕಾರ್ಮಿಕರು ಇರುವುದರಿಂದಲೇ ನಾವೆಲ್ಲ ಆರೋಗ್ಯವಂತರಾಗಿದ್ದೇವೆ. ಅವರ ಶ್ರಮಕ್ಕೆ ಬೆಲೆ ಕಟ್ಟಲಾಗದು. ಅವರನ್ನು ತಾಯಿ ಹೃದಯದಿಂದ ನೋಡಬೇಕು ಎಂದರು.
ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ್ ಮಾತನಾಡಿ, ಪೌರಕಾರ್ಮಿಕರು ನಗರದ ಜೀವನಾಡಿಗಳು. ಚಳಿ, ಮಳೆಯನ್ನೂ ಲೆಕ್ಕಿಸದೆ ಪ್ರತಿ ದಿನ ಕೆಲಸ ಮಾಡುತ್ತಾರೆ. ಅವರು ಆರೋಗ್ಯದ ಕಡೆಗೆ ಗಮನ ಹರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಮೇಯರ್ ಬಿ.ಎಚ್. ವಿನಾಯಕ, ಉಪ ಮೇಯರ್ ಯಶೋದಾ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಲತೀಫ್, ಪಾಲಿಕೆ ಸದಸ್ಯರಾದ ಎಸ್.ಟಿ. ವೀರೇಶ್, ಎಲ್.ಡಿ. ಗೋಣೆಪ್ಪ, ಕೆ.ಎಂ. ವೀರೇಶ್, ಸವಿತಾ, ಸುಧಾ, ಗೌರಮ್ಮ, ಪೌರಕಾರ್ಮಿಕರ ಸಂಘದ ಮುಖಂಡ ನೀಲಗಿರಿಯಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಗೋವಿಂದರಾಜು ಇದ್ದರು. ಪಾಲಿಕೆ ಆಯುಕ್ತೆ ರೇಣುಕಾ ಸ್ವಾಗತಿಸಿದರು.