ದಾವಣಗೆರೆಯಲ್ಲಿ ಪುಟಾಣಿ ರೈಲಿಗೆ ಹಸಿರು ನಿಶಾನೆ

ದಾವಣಗೆರೆ: ನಗರದ ಜೆ.ಎಚ್. ಪಟೇಲ್ ಬಡಾವಣೆಯ ಜಿಲ್ಲಾ ಬಾಲಭವನದಲ್ಲಿ ಪುಟಾಣಿ ರೈಲಿಗೆ ಸಂಸದ ಜಿ‌.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಸೋಮವಾರ ಹಸಿರು ನಿಶಾನೆ ತೋರಿದರು.

ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಭವನ ಸೊಸೈಟಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೂರು ಬೋಗಿಗಳಿರುವ ಈ ಪುಟಾಣಿ ರೈಲಿಗೆ 1.86 ಕೋಟಿ ರೂಪಾಯಿ ವೆಚ್ಚ ತಗುಲಿದೆ. ರೈಲ್ವೆ ಇಲಾಖೆಯಿಂದ ನಿರ್ಮಾಣವಾಗಿ 2016 ರಲ್ಲಿ ಜಿಲ್ಲೆಗೆ ಲಭ್ಯವಾಯಿತು. 300 ಮೀ.ನಷ್ಟು ವೃತ್ತಾಕಾರದ ಹಳಿ ನಿರ್ಮಾಣ ಮಾಡಲಾಗಿದೆ.

ಜಿಲ್ಲೆಯ ಮಕ್ಕಳ ಮನರಂಜನೆಗಾಗಿ ಈ ರೈಲು ಸಿದ್ಧವಾಗಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಈ ರೈಲನ್ನು ಓಡಿಸಲಾಗುತ್ತದೆ. ಇದರಲ್ಲಿ ಪ್ರಯಾಣಿಸಲು ಟಿಕೆಟ್ ಪಡೆಯಬೇಕಾಗುತ್ತದೆ.

ಜಿಲ್ಲಾ ಬಾಲಭವನ ಕಟ್ಟಡ 2015ರಲ್ಲಿ ನಿರ್ಮಾಣವಾಗಿದೆ‌‌. ಮಕ್ಕಳಲ್ಲಿರುವ ಪ್ರತಿಭೆಗೆ ಪ್ರೋತ್ಸಾಹ ನೀಡುವ ಅನೇಕ ಚಟುವಟಿಕೆಗಳನ್ನು ಬಾಲಭವನದಲ್ಲಿ ಹಮ್ಮಿಕೊಳ್ಳಲಾಗುವುದು.