ಬಾಲಕಾರ್ಮಿಕ ಮುಕ್ತ ಜಿಲ್ಲೆಯಾಗಿಸಲು ಪಣ

blank

ದಾವಣಗೆರೆ :  ಸಮಾಜದಲ್ಲಿ ಜಾಗೃತಿ ಮೂಡಿಸಿ ಬಾಲಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪಣ ತೊಡೋಣ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಮ. ಕರಣ್ಣವರ ಹೇಳಿದರು.  ಜಿಲ್ಲಾಡಾಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಗುರುವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.  ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು ಇನ್ನೂ ಪರಿಣಾಮಕಾರಿಯಾಗಿ ಕೆಲಸ ಮಾಡುವ ಅಗತ್ಯವಿದೆ. ಇದಕ್ಕಾಗಿ ಪ್ರಯತ್ನಗಳನ್ನು ವೇಗ ಗೊಳಿಸಬೇಕಿದೆ ಎಂದರು.  ಜಗತ್ತಿನಲ್ಲಿ 160 ಮಿಲಿಯನ್‌ಗಿಂತಲೂ ಅಧಿಕ ಮಕ್ಕಳು ಬಾಲಕಾರ್ಮಿಕ ಪದ್ಧತಿಯಲ್ಲಿ ತೊಡಗಿದ್ದಾರೆ. ಇದು ಮಕ್ಕಳಿಗೆ ದೈಹಿಕ ಮತ್ತು ಮಾನಸಿಕವಾಗಿ ಹಾನಿಯುಂಟು ಮಾಡುವಂತಹ ಕಾರ್ಯದಲ್ಲಿ ತೊಡಗುವುದಾಗಿದೆ.  ಮಾಲೀಕರು ಸಹ ಬಾಲಕಾರ್ಮಿಕತೆ ಅಥವಾ ಬಾಲಕಾರ್ಮಿಕ ಕಾರ್ಯಗಳಿಗೆ ಉತ್ತೇಜಿಸುವ, ತೊಡಗಿಸಿಕೊಳ್ಳುವ ಕುರಿತು ಮಾಹಿತಿ ಕಂಡು ಬಂದಲ್ಲಿ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು. ಈ ಪದ್ಧತಿ ನಿರ್ಮೂಲನೆಗಾಗಿ ಸರ್ಕಾರ ಹತ್ತಾರು ಕಾನೂನು ರೂಪಿಸಿದೆ ಎಂದು ತಿಳಿಸಿದರು.  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜೂನ್ ಅಂತ್ಯದವರೆಗೂ ಸಾಥಿ ಕ್ಯಾಂಪೇನ್ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 18 ವರ್ಷದೊಳಗಿನ ನಿರಾಶ್ರಿತ ಮಕ್ಕಳು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾದ ಪ್ರತಿಯೊಬ್ಬರಿಗೂ ಸಹಕಾರ ನೀಡಲಾಗುವುದು. ಸಮಾಜದ ಪ್ರತಿಯೊಬ್ಬರೂ ಕಾರ್ಯ ಪ್ರವೃತ್ತರಾಗಿ ಮತ್ತಷ್ಟು ಜಾಗೃತಿ ಮೂಡಿಸಬೇಕಿದೆ ಎಂದು ಆಶಯ ವ್ಯಕ್ತಪಡಿಸಿದರು.  ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ಇಂದಿಗೂ ಅಲ್ಲಲ್ಲಿ ಬಾಲಕಾರ್ಮಿಕ, ಬಾಲ್ಯ ವಿವಾಹದಂತಹ ಪ್ರಕರಣಗಳು ಕಂಡುಬರುತ್ತಿವೆ. ಇದರ ಜತೆಗೆ ಅನೈತಿಕ ಚಟುವಟಿಕೆಗಳಿಗೆ ದೂಡುವುದು, ತೊಡಗಿಸಿಕೊಳ್ಳುವುದು ಕಂಡುಬಂದಲ್ಲಿ ಸೂಕ್ತ ಮಾಹಿತಿ ನೀಡಬೇಕು. ಅಂತಹವರ ಮೇಲೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.  ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ಋತುಮಾನಕ್ಕೆ ಅನುಗುಣವಾಗಿ, ಬಡತನ, ಬಾಲ್ಯವಿವಾಹ ಇನ್ನಿತರೆ ಕಾರಣಗಳಿಂದ ಜಿಲ್ಲೆಯಲ್ಲಿ ಒಟ್ಟು 1960 ಮಕ್ಕಳು ಮತ್ತು ಪ್ರಾಥಮಿಕ ಶಾಲೆಗಳಲ್ಲಿ ರಾಜ್ಯದಲ್ಲಿ ಶೇ.2.7ರಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಸಾರ್ವಜನಿಕರು, ಸಂಘಟನೆ, ಇಲಾಖೆಗಳ ಸಹಕಾರದಿಂದ ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಜಾಗೃತಿ ಮೂಡಿಸುವುದರ ಜತೆಗೆ ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸೋಣ ಎಂದರು.  ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸರ್ಕಾರಿ ಶಾಲೆಯ ಮಕ್ಕಳಾದ ಹೇಮಾವತಿ, ಐಶ್ವರ್ಯ, ಸಂಜು ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕವನ, ಚಂದನ, ಹಜರತ್ ಅವರಿಗೆ ಬಹುಮಾನ ವಿತರಿಸಲಾಯಿತು.  ಬಾಲ ಕಾರ್ಮಿಕರ ಅತಿ ಹೆಚ್ಚು ಪ್ರಕರಣ (13) ದಾಖಲಿಸಿರುವ ಹರಿಹರದ ಕಾವ್ಯಾ ಅವರಿಗೆ ಸನ್ಮಾನಿಸಲಾಯಿತು. ಹಾಗೂ ಜೀತ ಪದ್ಧತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬಾಲಕಿ ಎಸ್‌ಎಸ್‌ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸ್ನೇಹಾ ಅವರನ್ನು ಸನ್ಮಾನಿಸಲಾಯಿತು.  ಇದೇ ಸಂದರ್ಭದಲ್ಲಿ ಬಾಲಕಾರ್ಮಿಕತೆ ವಿರೋಧಿ ದಿನಾಚರಣೆ ಕುರಿತು ಡಾನ್‌ಬಾಸ್ಕೋ ಸಂಸ್ಥೆಯ ಮಂಜುನಾಥ ಉಪನ್ಯಾಸ ನೀಡಿದರು.  ಹೆಚ್ಚುವರಿ ಎಸ್ಪಿ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಗಾಯತ್ರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ಮಠದ್, ಡಿಡಿಪಿಐ ಕೊಟ್ರೇಶ್, ವಿವಿಧ ಸಂಘಟನೆಗಳ ಮುಖಂಡರು, ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತ ಅವಿನಾಶ್ ಸ್ವಾಗತಿಸಿದರು.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…