ದಾವಣಗೆರೆ : ರಾಜ್ಯದಲ್ಲಿ ಒಳ ಮೀಸಲಾತಿ ಸಂಬಂಧ ಜಾತಿ ಗಣತಿ ಕಾಲಾವಧಿಯನ್ನು ಸರ್ಕಾರ ವಿಸ್ತರಿಸಿದ್ದು, ಛಲವಾದಿ ಸಮಾಜದವರು ಇದರ ಸದುಪಯೋಗ ಮಾಡಿಕೊಂದು ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ ಮನವಿ ಮಾಡಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಮೇ 5ರಿಂದ 17ರವರೆಗೆ ಮನೆ-ಮನೆ ಸಮೀಕ್ಷೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ಸಮೀಕ್ಷೆ ಕಾರ್ಯವು ಪೂರ್ಣವಾಗದ ಕಾರಣ ಕಾಲಾವಕಾಶ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಇದೀಗ ಮೇ 25ರವರೆಗೆ ವಿಸ್ತರಣೆಯಾಗಿದೆ. ಬ್ಲಾಕ್ ವ್ಯಾಪ್ತಿಯಲ್ಲಿ ವಿಶೇಷ ಶಿಬಿರಗಳನ್ನು ಮೇ 26ರವರೆಗೆ ಹಾಗೂ ಆನಲೈನ್ ಸಮೀಕ್ಷೆಯನ್ನು ಮೇ 28ರವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು. ಈಗಾಗಲೇ ಸಮಾಜದ ಮುಖಂಡರು ಪ್ರತಿ ಹಳ್ಳಿಗೆ ಭೇಟಿ ಕೊಟ್ಟು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಉಪಜಾತಿ ಕಾಲಂನಲ್ಲಿ ಛಲವಾದಿ ಎಂಬುದಾಗಿ ಕಡ್ಡಾಯವಾಗಿ ಬರೆಸಲು ಮನವಿ ಮಾಡುತ್ತಿದ್ದೇವೆ. ಆದರೂ ಕೆಲವು ಕಡೆ ಜಾತಿ ಹೇಳಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದಾರೆ. ಒಳ ಮೀಸಲಾತಿ ಜಾರಿಗೊಂಡು ಸರ್ಕಾರದ ಸೌಲಭ್ಯ ಪಡೆಯಲು ನಮ್ಮ ಸಮಾಜದ ನಿಖರ ಅಂಕಿ-ಅಂಶ ಅಗತ್ಯವಾಗಿದೆ. ಆದ್ದರಿಂದ ಸಮಾಜದವರು ಕೀಳರಿಮೆ, ಹಿಂಜರಿಕೆ ಬಿಟ್ಟು ಗಣತಿದಾರರಿಗೆ ಮಾಹಿತಿ ನೀಡಬೇಕು. ವೀರಶೈವ ಜಂಗಮರು ಬುಡ್ಗ, ಬೇಡ ಜಂಗಮದ ಹೆಸರಿನಲ್ಲಿ ಪರಿಶಿಷ್ಟ ಜಾತಿಯಲ್ಲಿ ಗುರುತಿಸಿಕೊಳ್ಳುತ್ತಿದ್ದು, ಇಂತಹದ್ದಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು. ಸಮಾಜದ ಮುಖಂಡರಾದ ಎಸ್. ಶೇಖರಪ್ಪ, ಎಚ್.ಬಿ. ಜಯಪ್ರಕಾಶ, ಎಸ್.ಬಿ. ನಾಗಭೂಷಣ, ಬಿ. ಸೋಮಶೇಖರ, ಶಿವಕುಮಾರ, ಅಣ್ಣಪ್ಪ, ಹಾಲೇಶ ಬಸವನಹಾಳ್, ಡಾ.ಜಗನ್ನಾಥ, ಎಸ್. ತಿಪ್ಪೇಸ್ವಾಮಿ, ಎ. ಕೊಟ್ರಬಸಪ್ಪ ಸುದ್ದಿಗೋಷ್ಠಿಯಲ್ಲಿದ್ದರು.
