More

  ಮಾನವನ ಸಮಸ್ಯೆಗಳಿಗೆ ಆಧ್ಯಾತ್ಮಿಕತೆಯೇ ಪರಿಹಾರ

  ದಾವಣಗೆರೆ: ಆಧ್ಯಾತ್ಮಿಕತೆ ಮಾತ್ರ ಮಾನವನ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು ಎಂದು ಚಿತ್ರದುರ್ಗ ಬೃಹನ್ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.
   ನಗರದ ವಿರಕ್ತಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಆರ್.ಪಿ. ಪಾಟೀಲ್ ಅವರ ಯಶಸ್ಸಿನ ಆಧ್ಯಾತ್ಮಿಕ ಸಂಹಿತೆಗಳು ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
   ಪ್ರಪಂಚದ ಯಾವುದೇ ವಸ್ತುಗಳು ಅಂಗಡಿ ಅಥವಾ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಆದರೆ, ಶಾಂತಿ-ನೆಮ್ಮದಿ ಬೇಕಾದರೆ ಪ್ರತಿಯೊಬ್ಬರೂ ಆಧ್ಯಾತ್ಮದ ಕಡೆಗೆ ಬರಲೇಬೇಕು ಎಂದು ತಿಳಿಸಿದರು.
   ಮನುಷ್ಯ ಹೊಟ್ಟೆಯ ಹಸಿವಿನಂತೆ ನೆತ್ತಿಯ ಹಸಿವನ್ನು ನೀಗಿಸಿಕೊಳ್ಳುವುದು ಕೂಡಾ ಮುಖ್ಯ. ಆಧ್ಯಾತ್ಮದ ಜ್ಞಾನ ಮಾತ್ರ ಮಾನವನ  ನೆತ್ತಿಯ ಹಸಿವನ್ನು ಪರಿಹರಿಸಬಲ್ಲದು. ಎಲ್ಲರಲ್ಲಿ ಒಳ್ಳೆಯ ಹಾಗೂ ಕೆಟ್ಟ ಗುಣ ಎರಡೂ ಇವೆ. ಆತ್ಮಾವಲೋಕನದಿಂದ ಒಳ್ಳೆಯತನದ ಕಡೆಗೆ ಸಾಗಬೇಕು ಎಂದರು.
   ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಅಡ್ಡದಾರಿಯಿಂದ ಯಾವುದೇ ಯಶಸ್ಸು ಲಭಿಸಲು ಸಾಧ್ಯವಿಲ್ಲ. ದೊಡ್ಡಗುರಿಯನ್ನಿಟ್ಟುಕೊಂಡು ಸ್ವಪ್ರಯತ್ನದಿಂದ ಬದುಕಿನಲ್ಲಿ ಮುನ್ನಡೆಯಬೇಕು. ಯಶಸ್ಸಿಗೆ ಯಾರ ಮೇಲೂ ಅವಲಂಬಿತರಾಗಬಾರದು.ಎಂದು  ತಿಳಿಸಿದರು.
   ಪ್ರವಚನಗಳು, ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಹಾಗೂ ಇಂತಹ ಕೃತಿಗಳು ನಮ್ಮ ಯಶಸ್ಸಿಗೆ ಪೂರಕವಾಗಬಲ್ಲವು. ಯಾರೋ ಹೇಳಿದ ಅಥವಾ ಬರೆದ ಒಂದು ಮಾತು ನಮ್ಮ ಬದುಕನ್ನೇ ಬದಲಾಯಿಸಬಲ್ಲದು ಎಂಬುದನ್ನು ಮಹಾತ್ಮಗಾಂಧೀಜಿ ಅವರ ಬದುಕಿನೊಂದಿಗೆ ಉದಾಹರಿಸಿದರು.
   ಶೈಕ್ಷಣಿಕ ಸಲಹೆಗಾರ ಜಗನ್ನಾಥ ನಾಡಿಗೇರ್ ಕೃತಿ ಪರಿಚಯಿಸಿದರು. ಲೇಖಕ ಆರ್.ಪಿ. ಪಾಟೀಲ್ ಕೃತಿಯ ಆಶಯಗಳನ್ನು ವ್ಯಕ್ತಪಡಿಸಿದರು. ಪ್ರಕಾಶಕಿ ಶಶಿಕಲಾ ಪಾಟೀಲ್, ಪ್ರವಚನಕಾರ ಡಾ.ಎನ್.ಬಿ. ನಾಗರಹಳ್ಳಿ ಇದ್ದರು.
   ಸಿಡಾಕ್ ತರಬೇತುದಾರ ಜಿ.ಬಿ. ಬಸವರಾಜ ಸ್ವಾಗತಿಸಿದರು. ಜಿ.ಕೆ. ವಿನಯ ವಂದಿಸಿದರು. ದಿವ್ಯಶ್ರೀ ಜೆ. ನಾಡಿಗೇರ್ ನಿರೂಪಿಸಿದರು

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts