More

    ಸೋಲಿನ ಪರಾಮರ್ಶೆ, ಹೋರಾಟದ ಸಂಕಲ್ಪ

    ದಾವಣಗೆರೆ : ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಜಿಲ್ಲೆಯ ಬಿಜೆಪಿ ಪಾಳಯದಲ್ಲಿ ಪರಾಮರ್ಶೆ ಆರಂಭವಾಗಿದೆ. ಸೋಲಿನಿಂದ ವಿಚಲಿತರಾಗದೆ ಮುಂಬರುವ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ಸಜ್ಜಾಗುವಂತೆ ಕಾರ್ಯಕರ್ತರನ್ನು ಅಣಿಗೊಳಿಸಲಾಗುತ್ತಿದೆ.
     ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ನಾಯಕರ ಮಾತುಗಳ ತಾತ್ಪರ್ಯವೂ ಅದೇ ಆಗಿತ್ತು.
     ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಸೋಲು, ಗೆಲುವು ಸಹಜವಾಗಿದ್ದು ಅದರಿಂದ ಕಾರ್ಯಕರ್ತರು ಧೃತಿಗೆಡಬಾರದು. ಮುಂದಿನ 5 ವರ್ಷ ಹೋರಾಟದ ಮೂಲಕ ನಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ಪಕ್ಷವನ್ನು ಬಲಪಡಿಸಬೇಕಿದೆ ಎಂದು ಹೇಳಿದರು.
     ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಸರ್ಕಾರ ಈಡೇರಿಸಬೇಕಿದೆ. ಅದಕ್ಕಾಗಿ ನಾವು ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
     ಮುಂಬರುವ ದಿನಗಳಲ್ಲಿ ಜಿ.ಪಂ, ತಾ.ಪಂ.ಗಳಲ್ಲಿ ಅಧಿಕಾರ ಹಿಡಿಯಬೇಕಿದೆ. ಇನ್ನೊಂದು ವರ್ಷದಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ತಿಳಿಸಿದರು.
     ಸೋಲಿನ ಕಾರಣಗಳನ್ನು ಪಟ್ಟಿ ಮಾಡಿದ ಅವರು, ಜಾತಿ ಸಮೀಕರಣ, ಕಾಂಗ್ರೆಸ್‌ನವರು ಮನೆ ಮನೆಗೆ ಗ್ಯಾರಂಟಿ ಕಾರ್ಡುಗಳನ್ನು ಹಂಚಿದ್ದು ಹಿನ್ನಡೆಗೆ ದಾರಿ ಮಾಡಿಕೊಟ್ಟಿತು ಎಂದು ಹೇಳಿದರು.
     ಅಭ್ಯರ್ಥಿಗಳ ಹೆಸರು ಘೋಷಣೆಯಲ್ಲಿ ವಿಳಂಬವಾಗಿದ್ದು ಮತ್ತೊಂದು ಪ್ರಮುಖ ಕಾರಣವಾಗಿದೆ. ಒಂದು ತಿಂಗಳ ಮುಂಚೆಯೆ ಅಭ್ಯರ್ಥಿಗಳ ಹೆಸರು ಘೋಷಿಸಿದ್ದರೆ ಅನುಕೂಲವಾಗುತ್ತಿತ್ತು, ಅಂಥ ತಪ್ಪು ಮರುಕಳಿಸುವುದು ಬೇಡ ಎಂದರು.
     ನನಗೆಂದೂ ಸೋಲಿನ ಅನುಭವ ಆಗಿಲ್ಲ, ಮುಂದೆ ಆಗುವುದೂ ಬೇಡ. ಈ ಚುನಾವಣೆಯಲ್ಲಿ ಸೋತಿದ್ದೇವೆಂದು ಸುಮ್ಮನಾಗದೆ ಪಕ್ಷವನ್ನು ಕಟ್ಟಿ ಬೆಳೆಸೋಣ ಎಂದರು.
     …
     * ಸೋತು ಗೆದ್ದ ಅನುಭವವಿದೆ
     ಮಾಜಿ ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ನಾನೂ 5 ಸಲ ಗೆದ್ದು 5 ಬಾರಿ ಸೋತಿದ್ದೇನೆ. ಸೋಲಿನಿಂದ ಕಂಗೆಡದೆ ಧೈರ್ಯವಾಗಿರಬೇಕು ಎಂದು ಸಲಹೆ ನೀಡಿದರು.
     ಪರಸ್ಪರ ದೋಷಾರೋಪಣೆ ಮಾಡದೆ ಒಳ್ಳೇ ಕೆಲಸಗಳನ್ನು ಮಾಡಿದರೆ ಪಕ್ಷ ಗುರುತಿಸುತ್ತದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳ ಜಾರಿಯ ವಿಚಾರದಲ್ಲಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ಕರೆ ನೀಡಿದರು.
     ಮಹಾನಗರ ಪಾಲಿಕೆ ಸದಸ್ಯೆ ಉಮಾ ಪ್ರಕಾಶ್ ಮಾತನಾಡಿದರು. ದಾವಣಗೆರೆ ಉತ್ತರ ಕ್ಷೇತ್ರ ಘಟಕದ ಅಧ್ಯಕ್ಷ ಸಂಗನಗೌಡರು, ಉಪ ಮೇಯರ್ ಯಶೋದಾ, ಪಾಲಿಕೆ ಸದಸ್ಯರಾದ ರೇಣುಕಾ, ಗೌರಮ್ಮ, ಶಿಲ್ಪಾ, ರೇಖಾ ಇದ್ದರು.
     ಮುಖಂಡರಾದ ದೇವರಮನೆ ಶಿವಕುಮಾರ್, ರಾಜನಹಳ್ಳಿ ಶಿವಕುಮಾರ್, ಎ.ವೈ. ಪ್ರಕಾಶ್, ಎಲ್.ಎನ್. ಕಲ್ಲೇಶ್, ಶ್ರೀನಿವಾಸ ದಾಸಕರಿಯಪ್ಪ, ಶಿವರಾಜ ಪಾಟೀಲ್, ರೇವಣಸಿದ್ದಪ್ಪ, ಎನ್.ಎಂ. ಮುರುಗೇಶ್, ಬಾತಿ ವೀರೇಶ್ ಇದ್ದರು. ಎನ್. ರಾಜಶೇಖರ್ ಸ್ವಾಗತಿಸಿದರು.
     …
     (ಕೋಟ್)
     ಕಾಂಗ್ರೆಸ್‌ನವರು 6 ತಿಂಗಳಿಂದ ಚುನಾವಣೆಗೆ ತಯಾರಿ ನಡೆಸಿದ್ದರು. ಕುಕ್ಕರ್, ಸೀರೆ, ತವಾ, ಕೋಳಿ, ಮಟನ್ ಹಂಚಿದರು. ಹಣ ಬಲ, ತೋಳ್ಬಲ ಕೆಲಸ ಮಾಡಿದವು. ಇದರ ಜತೆಗೆ ಒಳ ಮೀಸಲಾತಿ ನೀತಿಯಿಂದ ಕೆಲವು ಸಮುದಾಯಗಳಿಗೆ ಅಸಮಾಧಾನವಾಗಿದ್ದೂ ನಮ್ಮ ಹಿನ್ನಡೆಗೆ ಕಾರಣವಾಯಿತು. ನಾನು ಧೃತಿಗೆಟ್ಟಿಲ್ಲ, ಇನ್ನೂ ಚುನಾವಣೆ ಮಾಡುವ ಶಕ್ತಿಯಿದೆ. 5 ವರ್ಷ ನಿಮ್ಮ ಜತೆಗೇ ಇರುತ್ತೇನೆ.
      ಲೋಕಿಕೆರೆ ನಾಗರಾಜ್, ಪರಾಜಿತ ಬಿಜೆಪಿ ಅಭ್ಯರ್ಥಿ
     …
     
     (ಕೋಟ್)
     ನಾವು ಸೋತಾಗ ಮನೆ ಸೇರಿಲ್ಲ. ಕೆಲವರ ಸೋಲಿನ ನಂತರ ಅವರನ್ನು ಬ್ಯಾಟರಿ ಹಾಕಿ ಹುಡುಕಬೇಕಿತ್ತು. ನಾವು ಹಾಗಲ್ಲ, ಹೋರಾಟ ಮಾಡುತ್ತೇವೆ. ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವ ವರೆಗೂ ವಿರಮಿಸುವುದಿಲ್ಲ.
      ಯಶವಂತರಾವ್ ಜಾಧವ್, ಬಿಜೆಪಿ ಮುಖಂಡ
     …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts