ದಾವಣಗೆರೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವರ್ಷದ ಆದ್ಯತೆಯಾಗಿ ರೈತರಿಗೆ ಶೀಘ್ರವೇ ಬರ ಪರಿಹಾರ ಹಣ ಬಿಡುಗಡೆ ಮಾಡಬೇಕು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಒತ್ತಾಯಿಸಿದರು.
ತಾಲೂಕಿನ ಜಮಾಪುರ ಗ್ರಾಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಭೀಕರ ಬರಗಾಲದ ಪರಿಣಾಮ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದರು.
ಅಲ್ಪಸಂಖ್ಯಾತರೇ ಆದ್ಯತೆ ಎನ್ನುವ ಅರ್ಥದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡುತ್ತಾರೆ. ಆದರೆ ರೈತರಲ್ಲಿ ಎಲ್ಲ ಧರ್ಮ, ವರ್ಗ, ಸಮಾಜದವರೂ ಇರುತ್ತಾರೆ ಎಂದು ತಿಳಿಸಿದರು.
ಅಲ್ಪಸಂಖ್ಯಾತರಿಗೆ ಸಾವಿರಾರು ಕೋಟಿ ರೂ. ನೀಡುವುದಾಗಿ ಹೇಳುತ್ತೀರಿ, ಆ ಹಣವನ್ನು ಕೇಂದ್ರ ಸರ್ಕಾರ ಕೊಡಲಿ ಎಂದು ನೀವು ಕೇಳುವುದಿಲ್ಲ. ಆದರೆ ರೈತರ ವಿಚಾರ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರತ್ತ ಬೆರಳು ತೋರಿಸುತ್ತೀರಿ. ಚುನಾವಣೆ ಬಂದಾಗ ಬೇಕಾದರೆ ಓಲೈಕೆ ರಾಜಕಾರಣ ಮಾಡಿ. ಆದರೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ವೇಳೆ ರಾಜಕಾರಣವನ್ನು ಬದಿಗಿಡಿ ಎಂದು ಮನವಿ ಮಾಡಿದರು.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹೋಗುತ್ತದೆ, ಮಧ್ಯವರ್ತಿಗಳ ಅಗತ್ಯ ಇರುವುದಿಲ್ಲ. ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ 4 ಸಾವಿರ ರೂ. ನೀಡುತ್ತಿದ್ದರು, ಕಾಂಗ್ರೆಸ್ ಸರ್ಕಾರ ಅದನ್ನು ಬಂದ್ ಮಾಡಿತು. ರಾಜ್ಯ ಸರ್ಕಾರ ಪತ್ರಿಕೆಗಳಲ್ಲಿ ಪ್ರಚಾರ ಪಡೆದುಕೊಳ್ಳುವುದಕ್ಕಿಂತಲೂ, ಕೇಂದ್ರದ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಹೊಸ ವರ್ಷದ ಸಂದರ್ಭದಲ್ಲಿ ಬೂಟಾಟಿಕೆ ಮಾಡಲು ತಾವು ಬಂದಿಲ್ಲ, ರಾಜ್ಯ ಸರ್ಕಾರವನ್ನು ಎಚ್ಚರಿಸುವುದು ಈ ಭೇಟಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಸಂಸದ ಪ್ರತಾಪ್ ಸಿಂಹ ಅವರ ತಮ್ಮನ ವಿಚಾರದಲ್ಲಿ ರಾಜಕೀಯ ಪ್ರೇರಿತವಾಗಿ ನಡೆದುಕೊಳ್ಳಲಾಗುತ್ತಿದೆ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ್ರೆಸ್ ಹತಾಶೆಯಿಂದ ನಡೆದುಕೊಳ್ಳುತ್ತಿದೆ. ಇದಕ್ಕೆಲ್ಲ ಹೆದರುವ ಪ್ರಶ್ನೆ ಇಲ್ಲ ಎಂದರು.
…
* ಬರ ಪೀಡಿತ ಪ್ರದೇಶಕ್ಕೆ ಭೇಟಿ
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ, ದಾವಣಗೆರೆ ತಾಲೂಕಿನ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಬೆಳೆ ಹಾನಿಯ ಕುರಿತು ರೈತರಿಂದ ಮಾಹಿತಿ ಪಡೆದರು.
ಆನಗೋಡು ಸಮೀಪದ ಜಮಾಪುರ ಗ್ರಾಮದ ದಲಿತ ರೈತ ದಂಪತಿ ಮರುಳಪ್ಪ-ಸಿದ್ದಮ್ಮ ಅವರ ಜಮೀನಿಗೆ ಭೇಟಿ ನೀಡಿದ ವಿಜಯೇಂದ್ರ, ಮಳೆ ಇಲ್ಲದೇ ಒಣಗಿದ್ದ ಮೆಕ್ಕೆಜೋಳ ಬೆಳೆಯನ್ನು ವೀಕ್ಷಿಸಿದರು.
ರೈತ ಮರುಳಪ್ಪ ಮಾತನಾಡಿ, 4 ಎಕರೆಯಲ್ಲಿ ಮೆಕ್ಕೆಜೋಳ ಬೆಳೆದಿದ್ದೆವು, 4 ಚೀಲದಷ್ಟೂ ಬಂದಿಲ್ಲ. ಎಕರೆಗೆ 25-30 ಸಾವಿರ ರೂ. ಖರ್ಚು ಮಾಡಿದ್ದೇವೆ. ಬೆಳೆ ನಾಶವಾಗಿದೆ, ಏನೂ ಉಳಿದಿಲ್ಲ. ದನ ಕರುಗಳಿಗೆ ಮೇವು ಒದಗಿಸುವುದೂ ಕಷ್ಟವಾಗಿದೆ ಎಂದು ಸಂಕಷ್ಟ ತೋಡಿಕೊಂಡರು.
ಬರ ಪರಿಹಾರ ಸೇರಿ ಸರ್ಕಾರದ ಯಾವುದೇ ಸೌಲಭ್ಯ ಬಂದಿಲ್ಲ ಎಂದು ತಿಳಿಸಿದರು. ಕೇಂದ್ರ ಸರ್ಕಾರದಿಂದ ನೀಡುವ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಹಣವೂ ಬಂದಿಲ್ಲ ಎಂದು ರೈತರು ಹೇಳಿದಾಗ, ನಾಳೆ ತಮ್ಮ ಕಚೇರಿಗೆ ಬರುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು. ಆಗ ಮಧ್ಯ ಪ್ರವೇಶಿಸಿದ ವಿಜಯೇಂದ್ರ, ಏನಾಗಿದೆ ಎನ್ನುವ ಮಾಹಿತಿ ಪಡೆದು ರೈತರಿಗೆ ಹಣ ತಲುಪುವ ನಿಟ್ಟಿನಲ್ಲಿ ವ್ಯವಸ್ಥೆ ಮಾಡುವಂತೆ ಸ್ಥಳದಲ್ಲಿದ್ದ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಹರಿಹರ ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕರಾದ ಎಂ.ಪಿ. ರೇಣುಕಾಚಾರ್ಯ, ಪ್ರೊ. ಎನ್. ಲಿಂಗಣ್ಣ, ಬಸವರಾಜ ನಾಯ್ಕ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಇದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ, ಮುಖಂಡರಾದ ಜಿ.ಎಸ್. ಅನೀತ್, ಕೆ. ಪ್ರಸನ್ನ ಕುಮಾರ್, ರಾಜನಹಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಕೆ.ಎಂ. ಸುರೇಶ್, ಎಸ್.ಟಿ. ವೀರೇಶ್, ಬಿ.ಎಂ. ಸತೀಶ್, ಜಿ.ಎಸ್. ಶ್ಯಾಮ್, ಡಾ. ರವಿಕುಮಾರ್, ಕೆ.ಎಂ. ವೀರೇಶ್, ಅಣಜಿ ಗುಡ್ಡೇಶ್ ಹಾಜರಿದ್ದರು.
…
(ಬಾಕ್ಸ್)
ಕಣ್ಣೀರಿಟ್ಟ ರೈತ ದಂಪತಿ
ತಾವು ಬೆಳೆದ ಬೆಳೆಯು ಮಳೆ ಇಲ್ಲದೇ ಒಣಗಿರುವುದನ್ನು ವಿಜಯೇಂದ್ರ ಮುಂದೆ ಹೇಳಿಕೊಂಡ ಮರುಳಪ್ಪ-ಸಿದ್ದಮ್ಮ ಕಣ್ಣೀರಿಟ್ಟರು.
ಜೀವನ ನಿರ್ವಹಣೆ ಕಷ್ಟವಾಗಿದೆ. ಯಾವುದೇ ಪರಿಹಾರ ಹಣ ಬಂದಿಲ್ಲ. ಎಕರೆಗೆ 30 ಸಾವಿರ ರೂ. ಖರ್ಚು ಮಾಡಿದ್ದೇವೆ, ಒಂದು ರೂ. ಆದಾಯವೂ ಇಲ್ಲದಂತಾಗಿದೆ ಎಂದು ವಿವರಿಸಿದರು.
ರೈತ ದಂಪತಿಗೆ ಹಸಿರು ಶಾಲು ಹೊದಿಸಿ, ಹಣ್ಣು ನೀಡುವ ಮೂಲಕ ವಿಜಯೇಂದ್ರ ಸಮಾಧಾನಪಡಿಸಿದರು. ನಾವು ನಿಮ್ಮೊಂದಿಗೆ ಇದ್ದೇವೆ ಎನ್ನುವ ಅಭಯ ನೀಡಿದರು.
…
ಹೊಸ ವರ್ಷದಲ್ಲಿ ರೈತರೇ ಆದ್ಯತೆಯಾಗಲಿ
ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips
ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…
ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips
ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…
Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!
Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…