ದಾವಣಗೆರೆಯಲ್ಲಿ ಜೈವಿಕ ತಂತ್ರಜ್ಞಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ದಾವಣಗೆರೆ: ಬಿಐಇಟಿ ಕಾಲೇಜಿನಲ್ಲಿ ಬುಧವಾರ ಜೈವಿಕ ತಂತ್ರಜ್ಞಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆರಂಭವಾಯಿತು.

ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರಿಸರ್ಚ್ ನ ಗೌರವ ಪ್ರಾಧ್ಯಾಪಕ ಪದ್ಮಶ್ರೀ ಡಾ.ಎಂ.ಆರ್. ಎಸ್. ರಾವ್ ಕಾರ್ಯಕ್ರಮ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಪ್ರಗತಿಯಾಗಿದೆ, ಸಂಶೋಧನೆಗಳು ನಡೆಯುತ್ತಿವೆ. ಕ್ಯಾನ್ಸರ್ ರೋಗದ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ವಿಷಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜು ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಪ್ರಾಂಶುಪಾಲ ಡಾ.ಎಚ್. ಬಿ. ಅರವಿಂದ, ಡಾ.ರಂಗಸ್ವಾಮಿ, ವಿಷಯ ತಜ್ಞರು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು, ದೇಶದ ವಿವಿಧ ಭಾಗಗಳಿಂದ ಬಂದಿದ್ದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು. ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಲಾಯಿತು.