ಸಂಭಾವನೆಯಲ್ಲಿ ಕಲಾವಿದರ ಮಧ್ಯೆ ತಾರತಮ್ಯ

ದಾವಣಗೆರೆ: ಸಂಗೀತ ಹಾಗೂ ಜಾನಪದ ಕಲಾವಿದರ ಸಂಭಾವನೆಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿರುವುದು ಸರಿಯಲ್ಲ ಎಂದು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಹರಿಕಥೆ ದಾಸ ಡಾ. ಲಕ್ಷ್ಮಣ್‌ದಾಸ್ ಬೇಸರ ವ್ಯಕ್ತಪಡಿಸಿದರು.

ಹವ್ಯಾಸಿ ಗ್ರಾಮೀಣ ಕಲಾವಿದರ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಬಯಲಾಟ ಉತ್ಸವ, ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಗೀತ ಹಾಗೂ ಜಾನಪದ ಕಲಾವಿದರಿಗೆ ಸರ್ಕಾರದ ಸಂಭಾವನೆಯಲ್ಲಿ ವ್ಯತ್ಯಾಸವಿದೆ. ಇಬ್ಬರದೂ ಅವರವರ ಕ್ಷೇತ್ರದಲ್ಲಿ ಉತ್ತಮ ಸಾಧನೆ. ಸಂಭಾವನೆಯಲ್ಲಿ ತಾರತಮ್ಯ ಸರಿಯಲ್ಲ ಎಂದರು.

ಜಾನಪದಕ್ಕೆ ತನ್ನದೇ ಆದ ಅಸ್ಮಿತೆ ಇದೆ. ಜನಪದ ತಾಯಿ ಅಕ್ಷರ ವಂಚಿತೆ. ಆದರೂ, ತನ್ನ ನೋವು ನಲಿವಿನ ಭಾವನೆಗಳನ್ನು ಆಡು ಭಾಷೆಯಲ್ಲಿ ಮನಮುಟ್ಟುವಂತೆ ಕಟ್ಟಿಕೊಡುವ ಕಲೆ ಒಲಿದಿದೆ. ಸಂಗೀತಗಾರರಿಗೆ ದೊರೆಯುವಷ್ಟು ಮಾನ್ಯತೆ ಈ ಕಲಾವಿದರಿಗೂ ದೊರೆಯಬೇಕು ಎಂದರು.

60-70ರ ದಶಕದಲ್ಲಿ ನಾಟಕ, ಜಾನಪದ ಕಲೆ ಪ್ರದರ್ಶನ, ಹರಿಕಥೆ ಕೀರ್ತಿನೆಗೆ ಅಪಾರ ಜನ ಸೇರುತ್ತಿದ್ದರು. ಪ್ರಸ್ತುತ, ಸರ್ಕಾರ ಪ್ರೋತ್ಸಾಹ ನೀಡಿದರೂ ಪ್ರೇಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ. ದೃಶ್ಯ ಮಾಧ್ಯಮ ಪ್ರಭಾವದಿಂದ ಜಾನಪದ, ಹರಿಕಥೆ, ಕೀರ್ತಿನೆಗೆ ಸಹೃದಯರ ಕೊರತೆ ಕಾಡುತ್ತಿದೆ ಎಂದರು.

ಕಲಾವಿದರು ಸ್ವಾಭಿಮಾನಿಗಳು. ಅದರೊಂದಿಗೆ ವಿನಯದಿಂದ ಮಾತನಾಡುವ ಕಲೆ ರೂಢಿಸಿಕೊಂಡರೆ ಯಶಸ್ವಿಯಾಗಬಹುದು. ಹಲವು ಖ್ಯಾತ ಕಲಾವಿದರು, ಚಿಕಿತ್ಸೆಗೆ ಹಣವಿಲ್ಲದೇ ಪರದಾಡುತ್ತಿದ್ದಾರೆ. ಕೆಲವರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಸರ್ಕಾರ, ಅಂಥವರಿಗೆ ಸೂಕ್ತ ಸೌಲಭ್ಯ, ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಮಾತನಾಡಿ, ಇಂದಿನ ಮಕ್ಕಳು, ಪಾಲಕರಲ್ಲಿ ಕಲಾಸಕ್ತಿ ಕುಂದುತ್ತಿರುವ ಹಿನ್ನೆಲೆ ಪ್ರೇಕ್ಷರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂದು ವಿಶಾದ ವ್ಯಕ್ತಪಡಿಸಿದರು.

ಯುವ ಸಾಹಿತಿ ಎಂ. ಬಸವರಾಜ್ ಅವರಿಗೆ ಕಾಯಕ ಜೀವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಚ್.ಎಸ್. ಮಂಜುನಾಥ ಕುರ್ಕಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ಕೆ.ಎನ್. ಹನುಮಂತಪ್ಪ ಉಪಸ್ಥಿತರಿದ್ದರು.