ಸಿನಿಮಾ

ಹಳೆಯ ಪ್ರಕರಣಗಳ ಇತ್ಯರ್ಥಕ್ಕೆ ಆದ್ಯತೆ ಅಗತ್ಯ

ದಾವಣಗೆರೆ: ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸುವ ಕೆಲಸವನ್ನು ಆದ್ಯತೆಯ ಮೇರೆಗೆ ಮಾಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
 ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ, ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಜಿಲ್ಲೆಗೆ ವರ್ಗಾವಣೆಯಾಗಿ ಬಂದಿರುವ ನ್ಯಾಯಾಧೀಶರಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
 ನ್ಯಾಯಾಲಯದಲ್ಲಿ 2013ರ ವರೆಗೆ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಇಟ್ಟುಕೊಂಡು ಆ ನಿಟ್ಟಿನಲ್ಲಿ ಎಲ್ಲರೂ ಸೇರಿ ಪ್ರಯತ್ನ ಮಾಡೋಣ ಎಂದು ತಿಳಿಸಿದರು.
 ನ್ಯಾಯಾಲಯದ ಕಾರ್ಯಕಲಾಪಗಳ ಸುಗಮ ನಿರ್ವಹಣೆಗೆ ವಕೀಲರ ಸಹಕಾರ ಅಗತ್ಯವಾಗಿದೆ. ಸಂಘದ ವತಿಯಿಂದ ಹೊಸ ಕಾರ್ಯಕ್ರಮಗಳನ್ನು ರೂಪಸಿಬೇಕು. ಕ್ಷೇತ್ರಕ್ಕೆ ಬಂದಿರುವ ಹೊಸ ವಕೀಲರು ಹೆಚ್ಚು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
 ಜಿಲ್ಲೆಗೆ ನೂತನವಾಗಿ ವರ್ಗಾವಣೆಯಾಗಿ ಬಂದಿರುವ 2ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ರೇಷ್ಮಾ ಕೆ.ಎಚ್. ಮಾತನಾಡಿ, ನ್ಯಾಯ ಅರಸಿ ಬರುವ ಕಕ್ಷೀದಾರರಿಗೆ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ ನ್ಯಾಯ ಒದಗಿಸೋಣ ಎಂದು ಹೇಳಿದರು.
 ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ್ ಮಾತನಾಡಿ, ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವ ಜತೆಗೆ ಸಲಹೆಗಳನ್ನು ನೀಡುವ ಮೂಲಕ ಬದಲಾವಣೆಗೆ ಕಾರಣವಾಗೋಣ ಎಂದರು.
 ಜಿಲ್ಲಾ ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಂದೇ ರಥದ ಎರಡು ಚಕ್ರಗಳಿದ್ದಂತೆ. ನ್ಯಾಯದಾನದ ಕಾರ್ಯದಲ್ಲಿ ಇಬ್ಬರ ಪಾಲೂ ಮಹತ್ವದ್ದಾಗಿದೆ ಎಂದು ತಿಳಿಸಿದರು.
 ರಥದ ಎರಡೂ ಚಕ್ರಗಳೂ ಸರಿಯಾದ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ನ್ಯಾಯಾಂಗ ವ್ಯವಸ್ಥೆ ಆರೋಗ್ಯಕರವಾಗಿರುತ್ತದೆ. ಪರಸ್ಪರರನ್ನು ಗೌರವಿಸಿ ನ್ಯಾಯಾಂಗದ ಘನತೆಯನ್ನು ಎತ್ತಿ ಹಿಡಿಯೋಣ ಎಂದು ಹೇಳಿದರು.
 ದಾವಣಗೆರೆ ಜಿಲ್ಲಾ ವಕೀಲರ ಸಂಘದವರು ನ್ಯಾಯಾಧೀಶರಿಗೆ ಹೆಚ್ಚಿನ ಗೌರವವನ್ನು ನೀಡುತ್ತ ಬಂದಿದ್ದಾರೆ. ಬೇರೆ ಯಾವ ಜಿಲ್ಲೆಯಲ್ಲೂ ಇಂಥ ವಾತಾವರಣ ಕಾಣುವುದು ಅಪರೂಪ ಎಂದು ಅಭಿಪ್ರಾಯಪಟ್ಟರು.
 ಇದೇ ವೇಳೆ ಸಂಘದ ಉಪಾಧ್ಯಕ್ಷರಾಗಿ ಜಿ.ಕೆ. ಬಸವರಾಜ್, ಕಾರ್ಯದರ್ಶಿಯಾಗಿ ಎಸ್. ಬಸವರಾಜ್, ಸಹ ಕಾರ್ಯದರ್ಶಿಯಾಗಿ ಎ.ಎಸ್. ಮಂಜುನಾಥ್ ಪದಗ್ರಹಣ ಮಾಡಿದರು.
 ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಜಯಾನಂದ, ಮಕ್ಕಳಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಶ್ರೀಪಾದ್, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ದಶರಥ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಶಿವಪ್ಪ ಸಲಗಾರ್, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪ್ರವೀಣ್ ಕುಮಾರ್, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ನಿವೇದಿತಾ ಇದ್ದರು.
 
 …

Latest Posts

ಲೈಫ್‌ಸ್ಟೈಲ್