More

    ರೈಲಿನಲ್ಲಿ ದೊರೆತ ಹಣವಿರುವ ಬ್ಯಾಗ್ ಹಿಂತಿರುಗಿಸಿದ

    ದಾವಣಗೆರೆ : ಪ್ರಯಾಣಿಕರೊಬ್ಬರು ರೈಲಿನ ಬೋಗಿಯಲ್ಲಿ ಬಿಟ್ಟು ಹೋಗಿದ್ದ 2.80 ಲಕ್ಷ ರೂ. ಹಾಗೂ ಬಟ್ಟೆಗಳಿದ್ದ ಬ್ಯಾಗ್ ಅನ್ನು ಸಹ ಪ್ರಯಾಣಿಕರೊಬ್ಬರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
     ಬೆಂಗಳೂರಿನ ಟಿ. ದಾಸರಹಳ್ಳಿಯ ನಿವಾಸಿ ಎಸ್.ಎಸ್. ಸುಧಾಕರ್ ಅವರು ಸೋಮವಾರ, ರಾಮೇಶ್ವರ -ಹುಬ್ಬಳ್ಳಿ ಎಕ್ಸೃ್ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಹಣವಿದ್ದ ತಮ್ಮ ಬ್ಯಾಗ್ ಅನ್ನು ಬಿಟ್ಟು ಮತ್ತೊಂದು ಬ್ಯಾಗನ್ನು ತೆಗೆದುಕೊಂಡು ಬೀರೂರು ರೈಲು ನಿಲ್ದಾಣದಲ್ಲಿ ಇಳಿದು ಹೋದರು.
     ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಧರ್ಮಸ್ಥಳ ಸಂಘದ ದಾವಣಗೆರೆ ಗ್ರಾಮಾಂತರ ವಿಭಾಗದ ಲೆಕ್ಕ ಪರೀಕ್ಷಕ ಜಗದೀಶ್ ಅವರ ಕೈಗೆ ಆ ಬ್ಯಾಗ್ ಸಿಕ್ಕಿದೆ. ಅವರು ಅದನ್ನು ತೆರೆಯದೆ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದರು.
     ರೈಲ್ವೆ ಪೊಲೀಸ್ ಠಾಣೆಯ ಎಸ್‌ಐ ಕೆ.ಟಿ. ಅಣ್ಣಯ್ಯ ಮಾರ್ಗದರ್ಶನದಲ್ಲಿ ಎಎಸ್‌ಐ ಜಿ. ನಾಗರಾಜ್, ಹೆಡ್ ಕಾನ್‌ಸ್ಟೆಬಲ್‌ಗಳಾದ ಮಂಜುನಾಥ ವಿ, ಆನಂದಪ್ಪ ಕೆ., ಅರುಣ್ ಕುಮಾರ್ ಹಾಗೂ ಪೊಲೀಸ್ ಕಾನ್‌ಸ್ಟೆಬಲ್ ವಿನೋದ್ ಕುಮಾರ್ ಅವರು ಬ್ಯಾಗ್ ಅನ್ನು ತೆರೆದು ನೋಡಿದಾಗ ಹಣವಿರುವುದು ಗೊತ್ತಾಯಿತು.
     ಬ್ಯಾಗ್‌ನಲ್ಲಿದ್ದ ನಕಾಶೆಯ ನೆರವಿನಿಂದ ಗೂಗಲ್ ಸರ್ಚ್ ಮಾಡಿ ವಿಳಾಸ ಪತ್ತೆ ಹಚ್ಚಿ, ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಪೊಲೀಸರು ಸುಧಾಕರ್ ಅವರನ್ನು ಠಾಣೆಗೆ ಕರೆಸಿಕೊಂಡು ಬ್ಯಾಗ್ ಹಿಂತಿರುಗಿಸಿದರು. ಮನೆ ಕಟ್ಟಿಸಲು ಸ್ನೇಹಿತರೊಬ್ಬರಿಂದ ಸಾಲ ಮಾಡಿ ತೆಗೆದುಕೊಂಡು ಬಂದ ಹಣ ಇದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts