ದಾವಣಗೆರೆ : ಕೆಲವು ಗಡಿ ಭಾಗಗಳಲ್ಲಿ ಕನ್ನಡ ಮಾಯವಾಗುತ್ತಿದೆ. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ ಎಂದು ರಾಯಚೂರಿನ ಬೆಳಕು ಸಾಹಿತ್ಯ ಶೈಕ್ಷಣಿಕ ಟ್ರಸ್ಟ್ ಸಂಸ್ಥಾಪಕ ಅಣ್ಣಪ್ಪ ಮೇಟಿ ವಿಷಾದಿಸಿದರು. ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಚನ್ನಗಿರಿ ವಿರೂಪಾಕ್ಷಪ್ಪ ಧರ್ಮಶಾಲಾ ಕಲ್ಯಾಣ ಮಂಟಪದಲ್ಲಿ ಭಾನುವಾರ ಆಯೋಜಿಸಿದ್ದ, ವಿವಿಧ ಸಾಧಕರಿಗೆ ‘ಕರ್ನಾಟಕ ಮುಕುಟಮಣಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದಕ್ಕೆ ಬೇರೆ ರಾಜ್ಯದವರು ಕಾರಣರಲ್ಲ, ಕನ್ನಡಿಗರೇ ಇದರ ಹೊಣೆ ಹೊರಬೇಕಿದೆ. ನಮ್ಮ ಭಾಷೆಯನ್ನು ಪ್ರೀತಿಸಿದಾಗ ಕನ್ನಡ ಶಾಲೆಗಳು ಮುಚ್ಚುವುದಿಲ್ಲ ಎಂದು ಹೇಳಿದರು. ನವೆಂಬರ್ 1 ಬಂತೆಂದರೆ ಸ್ಟೇಟಸ್, ಡಿಪಿ, ವಾಟ್ಸಾಪ್, ಅಂತರ್ಜಾಲ ತಾಣಗಳ ಮೂಲಕ ‘ಪ್ರತಿ ಕಣ ಕಣದಲ್ಲಿಯೂ ಕನ್ನಡ ಇರಲಿ’ ಎಂದು ರಾಜ್ಯೋತ್ಸವದ ಶುಭಾಷಯ ಕಳಿಸುತ್ತಾರೆ. ಕನ್ನಡ ನೆಲದಲ್ಲಿ ಹುಟ್ಟಿರುವ ನಾವು ಅನ್ಯ ಭಾಷೆಗಳನ್ನು ಪ್ರೀತಿಸುವುದರ ಜತೆಗೆ ನಮ್ಮ ತಾಯಿ ಭಾಷೆಯನ್ನು ಮೈಗೂಡಿಸಿಕೊಳ್ಳಬೇಕು. ಕನ್ನಡವನ್ನು ಬೆಳೆಸುವ ಅವಶ್ಯಕತೆ ಇಲ್ಲ, ಉಳಿಸಿಕೊಂಡು ಹೋದರೆ ಸಾಕು ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಯುವ ಸಾಹಿತಿ ಡಾ. ಶ್ರೀದೇವಿ ಸೂರ್ಯಕಾಂತ ಸುವರ್ಣಖಂಡಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲ ಭಾಷೆಗಳ ಜ್ಞಾನ ಬೇಕು. ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನಲ್ಲಿ ಜನಿಸಿರುವುದೇ ಪುಣ್ಯ ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ರಾಜ್ಯ ಸರ್ಕಾರ, ಕನ್ನಡ ಸಾಹಿತ್ಯ ಪರಿಷತ್ ಮಾಡಬೇಕಾದ ಇಂತಹ ಪುರಸ್ಕಾರ ಕೆಲಸವನ್ನು ಕಲಾಕುಂಚ ಸಂಸ್ಥೆ ಮಾಡಿಕೊಂಡು ಬಂದಿದೆ. ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 87 ಹಿರಿಯ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು. ಕಲಾಕುಂಚ ಸಂಸ್ಥೆ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ ಪ್ರಾಸ್ತಾವಿಕ ಮಾತನಾಡಿ, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು ಶೈಕ್ಷಣಿಕ ಕಾಳಜಿಯಿಂದ ಕಲೆ, ಸಾಹಿತ್ಯ, ಯಕ್ಷಗಾನ, ಕವನ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಇದುವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 36 ಸಾವಿರ ಮಕ್ಕಳಿಗೆ, ಕನ್ನಡದಲ್ಲಿ 125ಕ್ಕೆ 125 ಅಂಕ ಗಳಿಸಿದವರಿಗೆ ಕನ್ನಡ ಕೌಸ್ತುಭ, 625ಕ್ಕೆ 600ಕ್ಕಿಂತ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಸರಸ್ವತಿ ಪುರಸ್ಕಾರ ನೀಡಿ ಸನ್ಮಾನಿಸಿದ್ದೇವೆ ಎಂದು ತಿಳಿಸಿದರು. ಈ ಕಾರ್ಯಕ್ರಮಗಳಿಗೆ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ, ಹಿರಿಯ ಸಾಹಿತಿಗಳಾದ ಶಿವರಾಮ ಕಾರಂತ, ಚಂದ್ರಶೇಖರ ಕಂಬಾರ, ಯು.ಆರ್.ಅನಂತಮೂರ್ತಿ, ಚನ್ನವೀರ ಕಣವಿ, ಹಿರಿಯ ಗಾಯಕಿಯರಾದ ಬಿ.ಕೆ.ಸುಮಿತ್ರಾ, ಕಸ್ತೂರಿ ಶಂಕರ್ ರಂತಹ ಮಹಾನ್ ವ್ಯಕ್ತಿಗಳು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ನೆನಪಿಸಿದರು. ಯಡ್ರಾಮಿಯ ಲೇಖಕ ಎಸ್.ಮಲ್ಲಿಕಾರ್ಜುನ ಅವರ ‘ಹೊಂಗನಸು’ ಹಾಗೂ ಜಮಖಂಡಿ ಕವಯತ್ರಿ ಡಾ.ಶ್ರೀದೇವಿ ಸೂರ್ಯಕಾಂತ ಸುವರ್ಣಖಂಡಿ ರಚಿಸಿದ ‘ಕಾಣದ ಕಡಲಿಗೆ’ ಕವನ ಸಂಕಲನಗಳನ್ನು ರಾಯಚೂರಿನ ಸಿದ್ದೇಶ್ವರ ಸಾಹಿತ್ಯ ವೇದಿಕೆಯ ಸಂಸ್ಥಾಪಕಿ ಗಿರಿಜಾ ಮಾಲಿಪಾಟೀಲ್ ಬಿಡುಗಡೆಗೊಳಿಸಿದರು. ಬೀದರ್‌ನ ವಿಶ್ವ ಕನ್ನಡಿಗರ ಸಂಸ್ಥೆಯ ರಾಜ್ಯಾಧ್ಯಕ್ಷ ಡಾ.ಸುಬ್ಬಣ್ಣ ಕರಕನಹಳ್ಳಿ, ಗದಗ್‌ನ ಅಶ್ವಿನಿ ಪ್ರಕಾಶನದ ಅಧ್ಯಕ್ಷ ಡಾ.ವಿ.ವಿ. ಹಿರೇಮಠ, ಶಿವಮೊಗ್ಗದ ಪತ್ರಿಕೋದ್ಯಮಿ ವೆಂಕಟೇಶ ಎಸ್.ಸಂಪ, ಸಂಸ್ಥೆಯ ಅಧ್ಯಕ್ಷ ಕೆ.ಎಚ್. ಮಂಜುನಾಥ್, ವಾಸಂತಿ ಮಂಜುನಾಥ್, ಜ್ಯೋತಿ ಗಣೇಶ ಶೆಣೈ ಇತರರಿದ್ದರು. ಶೈಲಾ ವಿನೋದ ನಿರೂಪಿಸಿದರು. ಶ್ರೀಮತಿ ಅಡಿಗ ಸ್ವಾಗತಿಸಿದರು. ಕೆ.ಸಿ. ಉಮೇಶ ವಂದಿಸಿದರು.
ಗಡಿ ಭಾಗದಲ್ಲಿ ಮಾಯವಾಗುತ್ತಿದೆ ಕನ್ನಡ
ಗ್ಯಾಸ್ಗೆ ವಾಸನೆಯೇ ಇಲ್ಲ! ಹೀಗಿದ್ದರೂ ಸಿಲಿಂಡರ್ ಲೀಕ್ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್ ಮಾತ್ರ | Gas Leakage
Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…
ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..! sweet
sweet: ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…
astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ
astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …