ದಾವಣಗೆರೆ : ಜಿಲ್ಲಾ ಬಿಜೆಪಿಯಿಂದ ನಗರದ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಟಲ್ಜಿ ವಿರಾಸತ್ ಜಿಲ್ಲಾ ಸಮ್ಮೇಳನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ದೇಶಭಕ್ತಿ, ಪ್ರಾಮಾಣಿಕ ರಾಜಕಾರಣದ ಸ್ಮರಣೆ ಮಾಡಲಾಯಿತು. ವಾಜಪೇಯಿ ಜನ್ಮ ಶತಾಬ್ದಿ ಅಂಗವಾಗಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಇಂದಿನ ಪೀಳಿಗೆಗೆ ಅಟಲ್ ಅವರ ಜೀವನ, ಸಾಧನೆಯ ವಿಶೇಷತೆಯನ್ನು ಪರಿಚಯಿಸುವ ಪ್ರಯತ್ನ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಮುಖಂಡರೆಲ್ಲ ವಾಜಪೇಯಿ ಅವರೊಂದಿಗೆ ಹೊಂದಿದ್ದ ಒಡನಾಟವನ್ನು ಮೆಲುಕು ಹಾಕುವ ಜತೆಗೆ ಆ ಕಾಲಘಟ್ಟದಲ್ಲಿದ್ದ ರಾಜಕಾರಣದ ಮೇಲೆ ಬೆಳಕು ಚೆಲ್ಲಿದರು. … (ಬಾಕ್ಸ್) ದೇಶಕ್ಕಾಗಿ ಬದುಕು ಸಮರ್ಪಣೆ ಅಟಲ್ ಬಿಹಾರಿ ವಾಜಪೇಯಿ ತಮ್ಮ ಬದುಕನ್ನು ದೇಶಕ್ಕಾಗಿ ಸಮರ್ಪಿಸಿಕೊಂಡಿದ್ದರು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅಟಲ್ ಅವರ ರಾಜಕಾರಣ ಆದರ್ಶಗಳಿಂದ ಕೂಡಿತ್ತು. ಅವರು ಹೋರಾಟದ ಹಿನ್ನೆಲೆಯಿಂದ ಬಂದವರು. ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಜೈಲು ವಾಸ ಅನುಭವಿಸಿದ್ದರು. ಜನಪರ ನಿಲುವು ಹೊಂದಿದ್ದರು ಎಂದು ತಿಳಿಸಿದರು. ಸಮರ್ಥ, ಸ್ವಾಭಿಮಾನಿ ಭಾರತ ಕಟ್ಟುವುದು ಅವರ ಕನಸಾಗಿತ್ತು. ಅವರ ಮಾತು, ವ್ಯಕ್ತಿತ್ವದಲ್ಲಿ ಶಕ್ತಿಯಿತ್ತು, ದೇಶಕ್ಕಾಗಿ ಮಿಡಿಯುವ ಗುಣವಿತ್ತು ಎಂದರು. ರಾಜ್ಯದ ವಿಧಾನಸಭೆಯಲ್ಲಿ ಸಚಿವರೊಬ್ಬರು 48 ಜನರ ಮೇಲೆ ಹನಿ ಟ್ರಾೃಪ್ ನಡೆದಿದೆ ಎಂದು ಹೇಳಿಕೆ ನೀಡಿರುವುದನ್ನು ಪ್ರಸ್ತಾಪಿಸಿ, ಇದೊಂದು ಕೆಟ್ಟ ಸರ್ಕಾರ ಎಂದು ಟೀಕಿಸಿದರು. ಇಂಥ ಸನ್ನಿವೇಶದಲ್ಲಿ ಅಟಲ್ ಬಿಹಾರಿ ವಾಜಪೇಯಿ ಆದರ್ಶ ಮಾದರಿಯಾಗಿದೆ ಎಂದು ತಿಳಿಸಿದರು. ರಾಜಕಾರಣಿಗಳು ನೀಲಗಿರಿ ಮರದಂತಾಗದೇ ಬಾಳೆಗಿಡದಂತೆ ಆಸರೆಯಾಗಬೇಕು ಎಂದು ಹೇಳಿದರು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ವಾಜಪೇಯಿ ಅವರಿಗೆ ಅಧಿಕಾರಕ್ಕಿಂತ ತತ್ವ, ಸಿದ್ಧಾಂತಗಳು ಮುಖ್ಯವಾಗಿದ್ದವು. ಕೇವಲ ಒಂದು ಸ್ಥಾನದ ಕೊರತೆಯಿಂದ ಅಧಿಕಾರ ಕಳೆದುಕೊಂಡರು. ಅವರು ಮನಸ್ಸು ಮಾಡಿದ್ದರೆ ಮತ್ತೊಮ್ಮೆ ಪ್ರಧಾನಿ ಆಗಬಹುದಿತ್ತು. ಈಗ ‘ಆಪರೇಷನ್’ ಮಾಡುವುದು ಸಾಮಾಮನ್ಯವಾಗಿದೆ. ಆದರೆ ವಾಜಪೇಯಿ ಅವರು ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ ಎಂದರು. ಚನ್ನಗಿರಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ವಿಧಾನಸಭೆಯಲ್ಲಿ ಬಿಜೆಪಿಯ ಶಾಸಕರನ್ನು 6 ತಿಂಗಳ ಕಾಲ ಅಮಾನತು ಮಾಡಿದ್ದನ್ನು ಪ್ರಸ್ತಾಪಿಸಿದರು. ಪಕ್ಷದ ಕಾರ್ಯಕರ್ತರು, ನಾಯಕರು ಎಚ್ಚೆತ್ತುಕೊಳ್ಳಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಬೇಕಿದೆ ಎಂದು ಹೇಳಿದರು. ಮಾಜಿ ಸಚಿವ ಎಸ್.ಎ. ರವೀಂದ್ರನಾಥ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕ ಎಂ. ಬಸವರಾಜ ನಾಯ್ಕ, ಪಕ್ಷದ ಮುಖಂಡರಾದ ಜೆ. ಸೋಮನಾಥ, ಎಲ್.ಎನ್. ಕಲ್ಲೇಶ್, ಸುಧಾ ಜಯರುದ್ರೇಶ, ಲೋಕಿಕೆರೆ ನಾಗರಾಜ, ಧನಂಜಯ ಕಡ್ಲೆಬಾಳ್, ಷಣ್ಮುಖಯ್ಯ, ಅನಿಲ ಕುಮಾರ್, ಮುರುಗೇಶ ಆರಾಧ್ಯ, ಅಣ್ಣೇಶ ಇದ್ದರು. ಎಚ್.ಪಿ. ವಿಶ್ವಾಸ ಸ್ವಾಗತಿಸಿದರು. … (ಬಾಕ್ಸ್) ಗೊಂದಲ ಬಗೆಹರಿಯಲಿ ಹಿರಿಯ ಮುಖಂಡ ಕೆ.ಬಿ. ಶಂಕರನಾರಾಯಣ ಮಾತನಾಡಿ ಪಕ್ಷದಲ್ಲಿ ಉಂಟಾಗಿರುವ ಗೊಂದಲಗಳು ಬಗೆಹರಿಯಬೇಕು. ಕಾರ್ಯಕರ್ತರಲ್ಲಿ ಸಮಸ್ಯೆಯಿಲ್ಲ, ನಾಯಕರಲ್ಲಿ ಗೊಂದಲಗಳಿವೆ. ಇದನ್ನು ಸರಿಪಡಿಸಿಕೊಂಡು ಮುಂದೆ ಸಾಗಬೇಕಿದೆ. ಮುಂಬರುವ ಚುನಾವಣೆಗಳಲ್ಲಿ ಪಕ್ಷವು ಮತ್ತೆ ಗೆಲ್ಲುವಂತೆ ಮಾಡಬೇಕು ಎಂದು ಹೇಳಿದರು. ನಂತರ ಮಾತನಾಡಿದ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಕೆಲವರ ನಡವಳಿಕೆಯಿಂದ ಕೆಟ್ಟ ಹೆಸರು ಬಂದಿದೆ. ಅವರಿಗೆ ಸ್ವಾರ್ಥವೇ ಮುಖ್ಯವಾಗಿದೆ. ತತ್ವ, ಸಿದ್ಧಾಂತಕ್ಕಿಂತ ಭ್ರಷ್ಟಾಚಾರವೇ ಅವರ ಮಾರ್ಗವಾಗಿದೆ ಎಂದು ಹೆಸರು ಹೇಳದೇ ಹರಿಹಾಯ್ದರು. … (ಕೋಟ್) ಅಟಲ್ ಬಿಹಾರಿ ವಾಜಪೇಯಿ ಜನ್ಮ ಶತಾಬ್ದಿ ಅಂಗವಾಗಿ ರಾಜ್ಯದಲ್ಲಿ 279 ಜನರಿಗೆ ಗೌರವಿಸಲಾಗಿದೆ. ಅಟಲ್ ಅವರ ಜತೆಗಿನ 350ಕ್ಕೂ ಹೆಚ್ಚು ಭಾವಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ದಾವಣಗೆರೆ ಜಿಲ್ಲೆಯವೇ 59 ಫೋಟೋಗಳಿವೆ. ಮಾ. 30ರ ವರೆಗೆ ಅಟಲ್ ವಿರಾಸತ್ ಸಮ್ಮೇಳನಗಳನ್ನು ನಡೆಸಲಾಗುವುದು. ಡಾ.ಎ.ಎಚ್. ಶಿವಯೋಗಿ ಸ್ವಾಮಿ, ಜನ್ಮ ಶತಾಬ್ದಿ ಸಮಿತಿಯ ಪ್ರಮುಖರು
