ದಾವಣಗೆರೆ : ಶ್ರೀ ಪದ್ಮನಾಭ ತೀರ್ಥರು ಮಧ್ವ ಸಿದ್ಧಾಂತವನ್ನು ಉತ್ತಮ ರೀತಿಯಲ್ಲಿ ಪ್ರಕಾಶ ಪಡಿಸಿದವರು ಎಂದು ಪಂಡಿತ ಗೋಪಾಲಾಚಾರ್ ಮಣ್ಣೂರು ಹೇಳಿದರು. ನಗರದ ಲಾಯರ್ ರಸ್ತೆಯ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಭಾನುವಾರ, ಶ್ರೀ ಪದ್ಮನಾಭ ತೀರ್ಥರ ಆರಾಧನೆ ಅಂಗವಾಗಿ ಪ್ರವಚನ ನೀಡಿದರು. ಪದ್ಮನಾಭ ತೀರ್ಥರು, ವಾಯುದೇವರ ಅವತಾರವಾದ ಶ್ರೀ ಮಧ್ವಾಚಾರ್ಯರ ಪ್ರಥಮ ಶಿಷ್ಯರಾಗಿದ್ದರು. ಇವರ ಪೂರ್ವಾಶ್ರಮದ ಹೆಸರು ಶೋಭನ ಭಟ್ಟರು. ವೇದ ಶಾಸ್ತ್ರ ಮತ್ತು ತರ್ಕ ಶಾಸ್ತ್ರದಲ್ಲಿ ಉದ್ದಾಮ ಪಂಡಿತರಾಗಿದ್ದರು. ಆ ಕಾಲದ ಅನೇಕ ಪಂಡಿತರು ಇವರನ್ನು ‘ವಿದ್ವತ್ ತಿಮಿಂಗಲ’ ಎಂದು ಕರೆಯುತ್ತಿದ್ದರು ಎಂದು ತಿಳಿಸಿದರು. ಶ್ರೀ ಮಧ್ವಾಚಾರ್ಯರ ಅಗಾಧ ಪಾಂಡಿತ್ಯಕ್ಕೆ ತಲೆದೂಗಿ ಅವರಿಂದ ವೈಷ್ಣವ ದೀಕ್ಷೆ ಹೊಂದಿ ಅವರ ಶಿಷ್ಯರಾದರು. ಇವರ ಪಾಂಡಿತ್ಯ ಮತ್ತು ಜ್ಞಾನವನ್ನು ಮನಗಂಡು ಮಧ್ವಾಚಾರ್ಯರು ಇವರಿಗೆ ಆಶ್ರಮ ಕೊಟ್ಟು ಪದ್ಮನಾಭ ತೀರ್ಥರು ಎಂದು ನಾಮಕರಣ ಮಾಡಿದರು ಎಂದರು. ಪದ್ಮನಾಭ ತೀರ್ಥರು ಮಧ್ವಾಚಾರ್ಯರ ಗ್ರಂಥಗಳಿಗೆ ಟೀಕೆ ಬರೆದಿರುವುದು ಸೇರಿದಂತೆ 15 ಕೃತಿಗಳನ್ನು ರಚಿಸಿದ್ದಾರೆ. ಇದೇ ಪರಂಪರೆಯಲ್ಲಿ ಬಂದವರಾದ ಶ್ರೀ ಜಯತೀರ್ಥರು ಪದ್ಮನಾಭ ತೀರ್ಥರಿಂದ ಪ್ರಭಾವಿತರಾಗಿದ್ದರು ಎಂದು ಹೇಳಿದರು. ಏಳು ವರ್ಷಗಳ ಕಾಲ ಆಶ್ರಮದಲ್ಲಿದ್ದ ಪದ್ಮನಾಭ ತೀರ್ಥರು, ಒಂದರ್ಥದಲ್ಲಿ ಎಲ್ಲ ಮಾಧ್ವ ಪೀಠಗಳಿಗೆ ಮೂಲ ಪುರುಷರು. ಇವರ ವೃಂದಾವನ ಆನೆಗೊಂದಿಯ ನವ ವೃಂದಾವನ ಗಡ್ಡಿಯಲ್ಲಿದೆ ಎಂದು ತಿಳಿಸಿದರು. ಶ್ರೀ ಪದ್ಮನಾಭತೀರ್ಥರ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಸರ್ವಜ್ಞಾಚಾರ್ಯ ಸೇವಾ ಸಂಘದಲ್ಲಿ ಬೆಳಗ್ಗೆ ವಾಯುಸ್ತುತಿ ಪುರಶ್ಚರಣ, ನಂದಕಿಶೋರ ಭಜಾನಾ ಮಂಡಳಿಯಿಂದ ಭಜನೆ ನಡೆಯಿತು. ನಂತರ ಪ್ರವಚನ ಮಂಗಳ, ತೀರ್ಥ ಪ್ರಸಾದ ವ್ಯವಸ್ಥೆ ಇತ್ತು. ಸರ್ವಜ್ಞಾಚಾರ್ಯ ಸೇವಾ ಸಂಘದ ಕಾರ್ಯದರ್ಶಿ ಪ್ರಾಣೇಶ್ ಕಟ್ಟಿ, ತಾಡಪತ್ರಿ ವೆಂಕಟಗಿರಿ, ಪ್ರಕಾಶ್ ಪಾಟೀಲ್, ಆನಂದ ತೀರ್ಥಾಚಾರ್, ರಘುನಾಥ್ ಮುಂತಾದವರು ಇದ್ದರು. … (ಬಾಕ್ಸ್) ಭೀಮರಾಯರ ಸೇವೆ ಅನನ್ಯ ಪಾಂಡುರಂಗಾಚಾರ ಮಣ್ಣೂರು ಮಾತನಾಡಿ, ಸರ್ವಜ್ಞಾಚಾರ್ಯ ಸೇವಾ ಸಂಘದ ಸಂಸ್ಥಾಪಕರಾದ ಭೀಮರಾಯರ ಬದುಕು, ಸಾಧನೆಯ ಬಗ್ಗೆ ವಿವರಿಸಿದರು. ಭೀಮರಾಯರು ಲೌಕಿಕದ ಜತೆಗೆ ಆಧ್ಯಾತ್ಮಿಕ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡಿದರು. ವೃತ್ತಿಯಿಂದ ವಕೀಲರಾಗಿದ್ದ ಅವರು ತಮ್ಮ ಕೆಲಸದಲ್ಲಿ ಹೆಸರು ಮಾಡಿದರು. ಉಡುಪಿಗೆ ಭೇಟಿ ನೀಡಿದ್ದ ವೇಳೆ ಮಧ್ವ ಸರೋವರದಲ್ಲಿ ಸ್ನಾನ ಮಾಡಿದ ನಂತರ ಅವರಲ್ಲಿ ಆಮೂಲಾಗ್ರ ಬದಲಾವಣೆ ಕಂಡುಬಂದಿತು. ಮನಸ್ಸು ಪರಿವರ್ತನೆಯಾಯಿತು. ಮುಂದೆ ಸಾಗಬೇಕಾದ ದಾರಿಯನ್ನು ಅಂದೇ ಕಂಡುಕೊಂಡರು ಎಂದು ತಿಳಿಸಿದರು. ಸರ್ವಜ್ಞಾಚಾರ್ಯ ಸೇವಾ ಸಂಘವನ್ನು ಸ್ಥಾಪಿಸಿ ಪಂಡಿತರನ್ನು ಕರೆಸಿ ಪ್ರವಚನಗಳನ್ನು ಏರ್ಪಡಿಸುತ್ತಿದ್ದರು. ಯಾವುದೇ ಸ್ಥಾನಮಾನಕ್ಕೆ ಅಪೇಕ್ಷೆಪಡದೇ ಸೇವೆ ಸಲ್ಲಿಸಿದರು. ಭಗವಂತನ ಅನುಗ್ರಹ ಪಡೆಯುವುದೊಂದೇ ಅವರ ಉದ್ದೇಶವಾಗಿತ್ತು ಎಂದರು. ಭೀಮರಾಯರು ಅನೇಕ ಗ್ರಂಥಗಳನ್ನು ರಚಿಸಿದರು. ಧರ್ಮ ನಿಷ್ಠರಾಗಿದ್ದ ಅವರಂಥ ಪಂಡಿತರು, ಸಜ್ಜನರು ಸಿಗುವುದು ವಿರಳ. ಅವರಿಗೆ ‘ಮಾಧ್ವ ಭೂಷಣ’ ಪ್ರಶಸ್ತಿಯೂ ಲಭಿಸಿತು. ಅವರ ಆದರ್ಶ ಜೀವನ ಅನುಕರಣೀಯವಾಗಿದೆ. ಭೀಮರಾಯರ ಗ್ರಂಥಗಳ ಅಧ್ಯಯನ ಮಾಡಬೇಕು, ಅವರ ಉಪಕಾರ ಸ್ಮರಣೆ ಮಾಡಬೇಕು ಎಂದು ಹೇಳಿದರು.
ಮಧ್ವ ತತ್ವ ಬೆಳಗಿದ ಪದ್ಮನಾಭ ತೀರ್ಥರು
ಕೇವಲ 10 ನಿಮಿಷದಲ್ಲಿ ಮನೆಯಲ್ಲೇ ಮಾಡಿ ಬ್ರೆಡ್ ಪಿಜ್ಜಾ; ಇಲ್ಲಿದೆ ಸಿಂಪಲ್ ವಿಧಾನ | Recipe
ಮನೆಯಲ್ಲಿದ್ದಾಗ ಕೆಲವೊಮ್ಮೆ ಬಹಳ ಹಸಿವಾಗುತ್ತಿರುತ್ತದೆ ಆದರೆ ಆ ಸಮಯದಲ್ಲಿ ಏನು ತಿನ್ನಬೇಕು ಎಂಬುದೆ ನಮಗೆ ತಿಳಿಯುವುದಿಲ್ಲ.…
ಊಟದ ಬಳಿಕ ಬೆಲ್ಲದ ಸೇವನೆಯಿಂದಾಗುವ ಪ್ರಯೋಜನ ಗೊತ್ತಾ?; ತಿಳಿದ್ರೆ ನೀವು ಮಿಸ್ ಮಾಡೋದೆ ಇಲ್ಲ | Health Tips
ಭಾರತದಲ್ಲಿ ಬೆಲ್ಲವನ್ನು ಸಾಮಾನ್ಯವಾಗಿ ಊಟದ ನಂತರ ತಿನ್ನಲಾಗುತ್ತದೆ. ನಿಮ್ಮ ಹಸಿವನ್ನು ನೀಗಿಸಲು ಇದನ್ನು ಸಿಹಿಯಾಗಿ ಸೇವಿಸಬಹುದು.…
ಟೊಮೆಟೊ ಸೇವನೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆಯೇ; ಈ ಬಗ್ಗೆ ತಜ್ಞರು ಹೇಳೋದೇನು? | Health Tips
ಕ್ಯಾನ್ಸರ್ ಚಿಕಿತ್ಸೆಯು ಇನ್ನೂ ಅತ್ಯಂತ ದುಬಾರಿ ಮತ್ತು ಅಸಾಧ್ಯವಾಗಿದೆ. ಇತ್ತೀಚೆಗೆ ಯುವಕರನ್ನೂ ಕಾಡುತ್ತಿರುವ ರೋಗ ಕ್ಯಾನ್ಸರ್.…