ಸಾಂವಿಧಾನಿಕ ಹಕ್ಕಿಗಾಗಿ ಹೋರಾಟ ಅಚಲ: ರಾಮಚಂದ್ರಪ್ಪ ಹೇಳಿಕೆ

ದಾವಣಗೆರೆ: ಕೇಂದ್ರದಲ್ಲಿ ಯಾವುದೇ ಸರ್ಕಾರ ಬರಲಿ, ಅಂಗನವಾಡಿ ಕಾರ್ಯಕರ್ತೆಯರ ಸಾಂವಿಧಾನಿಕ ಹಕ್ಕುಗಳಿಗಾಗಿ ಬಂಡಾಯ ಏಳುವ ನಿರ್ಧಾರದಲ್ಲಿ ಬದಲಿಲ್ಲ ಎಂದು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ ಹೇಳಿದರು.

ಎಐಟಿಯುಸಿ ನೇತೃತ್ವದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ನ ತಾಲೂಕು ಸಮಿತಿ ಇಲ್ಲಿನ ವಾಲ್ಮೀಕಿ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ 9ನೇ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ರಾಜ್ಯದಲ್ಲಿ 27 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ನಮ್ಮ ಹೋರಾಟಕ್ಕೆ ಸ್ವಲ್ಪ ಮಟ್ಟಿನ ಗೌರವಧನ ಏರಿಕೆಯಾಗಿದ್ದು ಬಿಟ್ಟರೆ ಅನೇಕ ಬೇಡಿಕೆ ಈಡೇರಿಲ್ಲ. ಕೇಂದ್ರ ಸರ್ಕಾರ 1500 ರೂ. ಹಾಗೂ ಕುಮಾರಸ್ವಾಮಿ ಸರ್ಕಾರ 500 ರೂ. ಏರಿಕೆ ಮಾಡುವುದಾಗಿ ಹೇಳಿತಾದರೂ ಕಾರ್ಯಗತಗೊಳಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಗನವಾಡಿ ಕಾರ್ಯಕರ್ತೆಯರ ಶ್ರಮದಿಂದಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಸಾವು ಕಡಿಮೆಯಾಗಿದೆ. ಅಂಗವಿಕಲ ಮಕ್ಕಳ ಜನನ ಪ್ರಮಾಣ ಕೂಡ ಕುಗ್ಗಿದೆ ಎಂಬುದನ್ನು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯೇ ಹೇಳುತ್ತದೆ. ಆದರೂ ದುಡಿವ ಈ ಮಹಿಳೆಯರ ಬೇಡಿಕೆಗಳು ಈಡೇರಿಲ್ಲ ಎಂದು ಬೇಸರಿಸಿದರು.

ಸರ್ಕಾರಿ ಇಲಾಖೆ ಅಧೀನದಲ್ಲೇ ಕೆಲಸ ಮಾಡುತ್ತಿದ್ದರೂ ಕಾಯಂ ಗೊಳಿಸುತ್ತಿಲ್ಲ. ಸಂಬಳ ಸಹಿತ ರಜೆ ನೀಡಲಾಗುತ್ತಿಲ್ಲ. ಅಂಗನವಾಡಿ ಕಾರ್ಯಕರ್ತೆಯರಿಗೆ ರಕ್ಷಣೆ ಇಲ್ಲ. ನಿವೃತ್ತಿಯಾದ 2800 ಜನರಿಗೆ ಎನ್‌ಪಿಎಸ್ ಹಣ ದೊರೆತಿಲ್ಲ. ದುಷ್ಕರ್ಮಿಗಳಿಂದಾಗಿ ಅಗಸನಕಟ್ಟೆ ಗ್ರಾಮದ ಶಿಕ್ಷಕಿ ದೈಹಿಕ ಹಲ್ಲೆಗೆ ಒಳಗಾಗಿದ್ದಾರೆ. ಇವರಿಗೆ ರಕ್ಷಣೆ ಇಲ್ಲ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕಾರ್ಯದರ್ಶಿ ಗಮನ ಹರಿಸಬೇಕು ಎಂದರು.

ಬಂಡಾಯ ಸಾಹಿತಿ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಎಲ್ಲರಿಗೂ ಮೊದಲ ಅಕ್ಷರ ಮೌಲ್ಯ ನೀಡಿದವರು ಅಂಗನವಾಡಿ ಶಿಕ್ಷಕರು. ಮನೆ ಬಾಗಿಲಿಗೆ ಹೋಗಿ ಪೌಷ್ಠಿಕಾಂಶ ನೀಡಿ ಬಂದವರು. ಮತ್ತೊಬ್ಬರ ಮಕ್ಕಳಿಗೆ ಪಾಠದ ಜತೆಗೆ ಅವರ ಚಟುವಟಿಕೆಗಳನ್ನು ಮಾಡುವವರು ಅಂಗನವಾಡಿ ಮಾತೆಯರು ಎಂದು ಬಣ್ಣಿಸಿದರು.

ಅನೇಕ ವರ್ಷ ದುಡಿದ ಅಂಗನವಾಡಿ ಕಾರ್ಯಕರ್ತೆಯರನ್ನು ತೆಗೆದು ಹಾಕುವುದು ಕೂಡ ಆಧುನಿಕ ಜೀತ ಪದ್ಧತಿ. ಕೇವಲ 6ರಿಂದ 8 ಸಾವಿರ ರೂ. ಗೌರವಧನ ನೀಡುವುದು ಸರಿಯಲ್ಲ ಎಂದರು.

ಸಮ್ಮೇಳನದಲ್ಲಿ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ವಿಶಾಲಾಕ್ಷಿ ಮೃತ್ಯುಂಜಯ, ಆನಂದರಾಜ್, ಆವರಗೆರೆ ಚಂದ್ರು, ಸರೋಜಮ್ಮ, ಎಸ್.ಎಸ್.ಮಲ್ಲಮ್ಮ, ರುದ್ರಮ್ಮ ಬೆಳಲಗೆರೆ, ಆವರಗೆರೆ ವಾಸು, ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ ಇದ್ದರು.

Leave a Reply

Your email address will not be published. Required fields are marked *