ದಾವಣಗೆರೆ : ಎಚ್‌ಐವಿ ಸೋಂಕಿತರನ್ನು ಸಾಮಾಜಿಕವಾಗಿ ದೂರವಿರಿಸುವುದು ಸರಿಯಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ತಿಳಿಸಿದರು. ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾಡಳಿತ, ಜಿ.ಪಂ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮಂಗಳವಾರ, ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಎಚ್‌ಐವಿ ಸೋಂಕಿತರೊಂದಿಗೆ ಕುಳಿತು ಊಟ ಮಾಡಿದರೆ ಅಥವಾ ಒಂದೇ ಮನೆಯಲ್ಲಿ ವಾಸವಿದ್ದ ಮಾತ್ರಕ್ಕೆ ಸೋಂಕು ಇತರರಿಗೆ ಹರಡುವುದಿಲ್ಲ. ಸೊಳ್ಳೆ ಕಚ್ಚುವುದರಿಂದ, ಒಂದೇ ಸ್ನಾನದ ಮನೆ, ಅಡುಗೆ ಮನೆ, ಶೌಚಗೃಹ ಬಳಸುವುದರಿಂದ ತೊಂದರೆಯಿಲ್ಲ. ಸೋಂಕಿತರೊಂದಿಗೆ ಅಸುರಕ್ಷಿತ ಲೈಂಗಿಕತೆ, ಅವರಿಂದ ರಕ್ತ ಪಡೆದರೆ, ಸಂಸ್ಕರಣೆ ಮಾಡದ ಸೂಜಿ, ಸಿರಿಂಜ್ ಬಳಕೆಯಿಂದ ಅಪಾಯವಿದೆ. ಸೋಂಕಿತರು ವೈದ್ಯರ ಸಲಹೆಯಂತೆ ಸರಿಯಾದ ಕ್ರಮದಲ್ಲಿ ನಿತ್ಯ ಔಷಧ ಸೇವನೆಯಿಂದ ಹಾಗೂ ಆರೋಗ್ಯಕರ ಜೀವನ ಶೈಲಿ ಅನುಸರಿಸಿದರೆ ಸಾಮಾನ್ಯರಂತೆ ಬದುಕಬಹುದು ಎಂದರು. ಏಡ್ಸ್, ರೋಗ ನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ ಮತ್ತು ಗುಣಾತ್ಮಕ ಜೀವನ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಾರ್ವಜನಿಕರು ಈ ರೋಗವು ಯಾವ ಮೂಲಗಳಿಂದ ಮತ್ತು ಯಾವ ರೀತಿ ಬರುತ್ತದೆ ಎಂಬುದನ್ನು ತಿಳಿಯಬೇಕು. ಏಡ್ಸ್ ಕಾಯಿಲೆ ಹೊರ ದೇಶದಿಂದ ಬಂದಿದ್ದು. ಇದರ ಕುರಿತು ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. ರೋಗ ಬಂದ ನಂತರ ಪರಿತಪಿಸುವ ಬದಲು ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸಬೇಕು. ಎಚ್.ಐ.ವಿ ಬಂದಿದೆ ಎಂದು ತಿಳಿದಾಕ್ಷಣ ಕುಗ್ಗದೇ, ಪರಿಹಾರ ಕಂಡುಕೊಳ್ಳಬೇಕು. ಪ್ರಜ್ಞಾವಂತರಾಗಿ ಬದುಕಿ ಸ್ವಸ್ಥ ಸಮಾಜ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. 2030 ರ ವೇಳೆಗೆ ಏಡ್ಸ್ಮುಕ್ತ ಸಮಾಜ ಮಾಡುವ ಗುರಿಯನ್ನು ಹೊಂದಲಾಗಿದ್ದು ಇದಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು. ಡಿಎಚ್‌ಒ ಡಾ.ಷಣ್ಮುಖಪ್ಪ ಮಾತನಾಡಿ, ಎಚ್‌ಐವಿ ರೋಗಕ್ಕೆ ಇದುವರೆಗೂ ಯಾವುದೇ ಲಸಿಕೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಹೀಗಾಗಿ ಸೋಂಕು ಬಾರದಂತೆ ಮುಂಜಾಗ್ರತೆ ವಹಿಸುವುದು ಒಂದೇ ಮನುಕುಲಕ್ಕೆ ಸದ್ಯದ ಮಟ್ಟಿಗೆ ಇರುವ ದಾರಿಯಾಗಿದೆ ಎಂದು ಹೇಳಿದರು. ಸೋಂಕಿತರಿಗೆ ಸಾಮಾಜಿಕ ಹಾಗೂ ಕೌಟುಂಬಿಕ ಬೆಂಬಲ ದೊರೆತಾಗ ಮಾತ್ರ, ಅವರೂ ಕೂಡ ಸಮಾಜದಲ್ಲಿ ಸಹಜ ಬದುಕು ಕಂಡುಕೊಳ್ಳಲು ಸಾಧ್ಯ. ಸಾರ್ವಜನಿಕರು ಮತ್ತು ಎನ್‌ಜಿಒಗಳು ಒಟ್ಟಾಗಿ ಜನರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದರು. ಎಚ್.ಐ.ವಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಡಾ.ಸಂಜಯ್, ಇಎಸ್‌ಐ ಆಸ್ಪತ್ರೆಯ ವೈದ್ಯ ಡಾ.ರಾಕೇಶ್, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಕಾರ್ಯಕ್ರಮ ಅಧಿಕಾರಿ ಡಾ.ಪಿ.ಡಿ. ಮುರಳೀಧರ್, ಟಿಎಚ್‌ಒ ಡಾ.ದೇವರಾಜ ಪಿ.ಪಟಿಗೆ, ಜಿಲ್ಲಾ ಆರೋಗ್ಯ ಶಿಕ್ಷಣಧಿಕಾರಿ ಡಾ.ಸುರೇಶ್ ಎನ್.ಬಾರ್ಕಿ, ವಿದ್ಯಾರ್ಥಿಗಳು ಸಾರ್ವಜನಿಕರು ಇದ್ದರು. … ಜಾಗೃತಿ ಜಾಥಾ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿಶ್ವ ಏಡ್ಸ್ ದಿ
.ನಚಾರಣೆಯ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಗೆ ಚಿಗಟೇರಿ ಆಸ್ಪತ್ರೆ ಆವರಣದಲ್ಲಿ ಡಿಎಚ್‌ಒ ಡಾ.ಷಣ್ಮುಖಪ್ಪ ಚಾಲನೆ ನೀಡಿದರು.