ಕೃಷಿ ಕಾರ್ಯಕ್ಕೂ ನರೇಗಾ ಹಣದ ಪ್ರಸ್ತಾವನೆ

ದಾವಣಗೆರೆ : ಕೃಷಿ ಚಟುವಟಿಕೆಗೂ ನರೇಗಾದಡಿ ಕೃಷಿ ಕಾರ್ಮಿಕರಿಗೆ ಹಣ ನೀಡುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತಾಲೂಕು ಪಂಚಾಯಿತಿ ನಿರ್ಣಯಿಸಿದೆ.

ತಾಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ಅಧ್ಯಕ್ಷತೆಯಲ್ಲಿ ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ತೋಟಗಾರಿಕೆ ಬೆಳೆಗಳಲ್ಲಿ ಬದು, ಗುಂಡಿ ನಿರ್ಮಾಣಕ್ಕೆ ನರೇಗಾದಡಿ ಅನುಕೂಲವಿದೆ. ಕೃಷಿ ಬೆಳೆಗೂ ವಿಸ್ತರಿಸಿದಲ್ಲಿ ರೈತಕಾರ್ಮಿಕರಿಗೆ ನಿರ್ದಿಷ್ಟ ದಿನದ ಕೆಲಸ ಸಿಗಲಿದೆ. ಗುಳೆ ತಪ್ಪಲಿದೆ ಎಂದು ಸದಸ್ಯ ಬಿ.ಜಿ.ಸಂಗಜ್ಜಗೌಡ ಪ್ರಸ್ತಾಪಿಸಿದರು.

ತೋಟಗಾರಿಕೆ ಇಲಾಖೆ ಎಡಿ ಯತಿರಾಜ್ ಮಾತನಾಡಿ, ಅಡಕೆ ಹೊರತಾಗಿ ಪರ್ಯಾಯ ಬೆಳೆ ಕಂಡುಕೊಳ್ಳದಿದ್ದರೆ ಕಷ್ಟವಾಗಲಿದೆ. ನುಗ್ಗೆ ಬೆಳೆಗೆ ಬೇಡಿಕೆ ಇದೆ. ಗುಚ್ಛ ಗ್ರಾಮ ಯೋಜನೆಯಡಿ ಕಡಿಮೆ ನೀರು, ಗೊಬ್ಬರ ಬಳಸಿ ಪೇರಲ, ನೇರಳೆ ಇನ್ನಿತರೆ ಪರ್ಯಾಯ ಬೆಳೆ ಬೆಳೆಯಬಹುದು. ಶೇ.50ರಷ್ಟು ಸಬ್ಸಿಡಿ ನೆರವಿದೆ ಎಂದರು.

ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸುವ ವಿಚಾರದಲ್ಲಿ ಎಲ್ಲರೂ ಸೇರಿ ಆಗ್ರಹಿಸೋಣ ಎಂದು ಸಂಗಜ್ಜಗೌಡ ದನಿಗೂಡಿಸಿದರು. ಹಣ್ಣಿನ ಗಿಡಗಳ ಬದಲಾಗಿ ಸಾಂಬಾರ್ ಗಿಡಗಳನ್ನು ಕೊಡುವಂತೆ ಸದಸ್ಯರು ಆಗ್ರಹಿಸಿದರು.

ಉಪಾಧ್ಯಕ್ಷ ಎಚ್.ಆರ್.ಮರುಳಸಿದ್ದಪ್ಪ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜಿ.ಎನ್.ನಾಗರಾಜ, ಸಹಾಯಕ ನಿರ್ದೇಶಕ ಎನ್.ಜೆ. ಆನಂದ್, ಸಹಾಯಕ ಲೆಕ್ಕಾಧಿಕಾರಿ ಏಳುಕೋಟೆ ಇದ್ದರು.