ಮಗಳೇ ನನ್ನ ಪ್ರಪಂಚ

ಬೆಂಗಳೂರು: ನಟಿ ರಾಧಿಕಾ ಪಂಡಿತ್ ಸದ್ಯ ತಾಯ್ತನದ ಖುಷಿಯನ್ನು ಅನುಭವಿಸುತ್ತಿದ್ದಾರೆ. ಮಗಳ ಲಾಲನೆ ಪಾಲನೆಯಲ್ಲಿ ಸಖತ್ ಬಿಜಿ ಆಗಿದ್ದಾರೆ. ಪುತ್ರಿಯ ಹೆಸರೇನು ಎಂಬುದು ಇದುವರೆಗೆ ಎಲ್ಲಿಯೂ ಬಹಿರಂಗಗೊಂಡಿಲ್ಲ. ಹಾಗಾದರೆ, ಮಗುವಿನ ಹೆಸರು ಯಾವಾಗ ತಿಳಿಸುತ್ತಾರೆ? ಆ ಬಗ್ಗೆ ಸ್ವತಃ ರಾಧಿಕಾ ಪ್ರತಿಕ್ರಿಯಿಸಿದ್ದಾರೆ. ನಟಿ ಪ್ರಿಯಾಮಣಿ ಅಭಿನಯದ ‘ವೈಟ್’ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಬಹಳ ದಿನಗಳ ನಂತರ ಮಾಧ್ಯಮಗಳ ಜತೆ ಮಾತನಾಡಿದ್ದಾರೆ.

‘ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನಮ್ಮ ಮಗುವಿಗೆ ಹೆಸರು ಸೂಚಿಸುತ್ತಿದ್ದಾರೆ. ಸದ್ಯಕ್ಕೆ ನಮ್ಮ ಮಗಳಿಗೆ ಯಾವುದೇ ಹೆಸರಿಟ್ಟಿಲ್ಲ. ಒಂದೊಳ್ಳೆಯ ಹೆಸರನ್ನು ಅಂತಿಮಗೊಳಿಸಿ ಎಲ್ಲರಿಗೂ ಹೇಳಲಿದ್ದೇವೆ. ನಮ್ಮ ಮದುವೆಯಿಂದ ಹಿಡಿದು ಪ್ರತಿಯೊಂದು ವಿಚಾರಗಳನ್ನು ಬಹಳ ವಿಶೇಷವಾಗಿಯೇ ಹೇಳಿದ್ದೇವೆ. ಅದೇ ರೀತಿ ಮಗಳ ಹೆಸರನ್ನು ತಿಳಿಸಲಿದ್ದೇವೆ’ ಎಂದಿರುವ ಅವರು, ಈ ಮೂಲಕ ಮತ್ತೊಂದು ಮಾಹಿತಿ ಹೊರಹಾಕಿದ್ದಾರೆ. ಅದೇನೆಂದರೆ, ಸಾಮಾಜಿಕ ಜಾಲತಾಣಗಳಲ್ಲಿ ಯಶ್-ರಾಧಿಕಾ ಮಗು ಎಂದು ಪುಟಾಣಿ ಮಕ್ಕಳ ಫೋಟೋಗಳು ಹರಿದಾಡುತ್ತಿವೆಯಂತೆ. ಆದರೆ, ಇದುವರೆಗೂ ತಮ್ಮ ಮಗುವಿನ ಫೋಟೋವನ್ನು ಎಲ್ಲಿಯೂ ರಿಲೀಸ್ ಮಾಡಿಲ್ಲ ಎನ್ನುತ್ತಾರೆ ರಾಧಿಕಾ.

ಇನ್ನು, ಮಗಳು ಬಂದ ಮೇಲೆ ರಾಧಿಕಾ ಜೀವನ ಇನ್ನಷ್ಟು ಬಿಜಿ ಆಗಿದೆಯಂತೆ. ಆ ಬಿಜಿ ಜೀವನವನ್ನು ಅವರು ಸಖತ್ ಎಂಜಾಯ್ ಮಾಡುತ್ತಿದ್ದಾರೆ ಕೂಡ. ‘ಸದ್ಯಕ್ಕಂತೂ ನನ್ನ ಮಗಳೇ ನನಗೆ ಎಲ್ಲ. ನಾನು ಟಿವಿ ನೋಡಿ ಎಷ್ಟೋ ದಿನಗಳಾಯ್ತು. ನನ್ನ ಗಮನವೆಲ್ಲ ಅವಳ ಮೇಲೆಯೇ ಇರುತ್ತದೆ. ಇನ್ನು, ಆಕೆಯಲ್ಲಿ ನನಗಿಂತ ಯಶ್ ಗುಣಗಳೇ ಜಾಸ್ತಿ ಇವೆ ಎನಿಸುತ್ತಿದೆ. ಎಲ್ಲರೂ ಅದನ್ನೇ ಹೇಳುತ್ತಿದ್ದಾರೆ’ ಎಂಬುದು ರಾಧಿಕಾ ಮಾತು. 2016ರಲ್ಲಿ ತೆರೆಕಂಡ ‘ಸಂತು ಸ್ಟ್ರೇಟ್ ಫಾರ್ವರ್ಡ್’ ನಂತರ ರಾಧಿಕಾ ನಟನೆಯ ಯಾವ ಸಿನಿಮಾಗಳೂ ತೆರೆಕಂಡಿಲ್ಲ. ಅವರ ‘ಆದಿಲಕ್ಷ್ಮೀ ಪುರಾಣ’ ತೆರೆಗೆ ಸಿದ್ಧವಾಗಿದೆ. ‘ಇದು ತುಂಬ ಒಳ್ಳೆಯ ಸಿನಿಮಾ. ಕಾಮಿಡಿ ಇದೆ, ಜಾಸ್ತಿ ಮನರಂಜನೆ ಇದೆ. ಬಿಡುಗಡೆ ಸ್ವಲ್ಪ ತಡವಾಯ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಇನ್ನೇನು ಕೆಲವೇ ದಿನಗಳಲ್ಲಿ ತೆರೆಗೆ ಬರಬಹುದು’ ಎಂದು ಮಾಹಿತಿ ನೀಡುತ್ತಾರೆ ರಾಧಿಕಾ. ಮತ್ತೆ ಯಶ್ ಜತೆ ರಾಧಿಕಾ ಸಿನಿಮಾ ಮಾಡುವುದು ಯಾವಾಗ? ಆ ಪ್ರಶ್ನೆಗೂ ರಾಧಿಕಾ ಬಳಿ ಉತ್ತರವಿದೆ. ‘ಮೊದಲಿನಿಂದಲೂ ನಾವು ಹೇಳಿಕೊಂಡು ಬಂದಿರುವುದೇನೆಂದರೆ, ನಮ್ಮದು ಹಿಟ್ ಕಾಂಬಿನೇಷನ್ ಅಂತ ಸಿನಿಮಾ ಮಾಡುವುದು ಬೇಡ. ಕಥೆಗೆ ನಾವೇ ಸೂಕ್ತ ಎನಿಸಿದರೆ, ನಮ್ಮ ಕಾಂಬಿನೇಷನ್​ನ ಅವಶ್ಯಕತೆ ಇದೆ ಎನಿಸಿದರೆ ಮಾತ್ರ ಒಪ್ಪಿಕೊಳ್ಳುತ್ತೇವೆ. ಅಂಥ ಸ್ಕ್ರಿಪ್ಟ್ ಬಂದರೆ ಖಂಡಿತ ಯಶ್ ಮತ್ತು ನಾನು ಒಟ್ಟಿಗೆ ನಟಿಸುತ್ತೇವೆ’ ಎಂದಿದ್ದಾರೆ.

ಯಶ್ ಎಷ್ಟೇ ಬಿಜಿ ಇದ್ದರೂ, ಮಗು ಮತ್ತು ನನಗಾಗಿ ಯಾವಾಗಲೂ ಟೈಮ್ ಮಾಡಿಕೊಳ್ಳುತ್ತಾರೆ. ಮಗು ಜತೆ ಯಶ್ ಕಾಲ ಕಳೆಯುವುದನ್ನು ನೋಡುವುದೇ ನನಗೆ ದೊಡ್ಡ ಸಂಭ್ರಮ. ಮಗು ಜತೆ ಅವರೂ ಮಗುವಾಗಿಬಿಡ್ತಾರೆ.

| ರಾಧಿಕಾ ಪಂಡಿತ್ ನಟಿ

Leave a Reply

Your email address will not be published. Required fields are marked *