VIDEO: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಸೊಸೆಯಿಂದ ಕೌಟುಂಬಿಕ ದೌರ್ಜನ್ಯ ಆರೋಪ: ಸಾಕ್ಷ್ಯಕ್ಕೆ ಸಿಸಿ ಕ್ಯಾಮರಾ ದೃಶ್ಯ

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ, ತಮ್ಮ ಪತ್ನಿ ಹಾಗೂ ಪುತ್ರನ ಜತೆಗೂಡಿ ಸೊಸೆ ಮೇಲೆ ದೌರ್ಜನ್ಯ ಎಸಗಿದರೇ ಎಂಬ ಪ್ರಶ್ನೆಗೆ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ದೃಶ್ಯಗಳು ಹೌದು ಎಂಬ ಉತ್ತರ ನೀಡಿದೆ.

ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ಸೊಸೆ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾರೆ. ಇವರ ಸೊಸೆ ಸಿಂಧು ಶರ್ಮ ಅವರು ಮಾವ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು ಪತಿ ನೂಟಿ ವಸಿಷ್ಠ ವಿರುದ್ಧ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದು, ಅದರ ವಿಚಾರಣೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಸಿಂಧು ಶರ್ಮ ಅವರಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರದಲ್ಲಿ ಸಿಂಧು ಅವರು ಸಿಸಿ ಕ್ಯಾಮರಾದ ಈ ದೃಶ್ಯಗಳನ್ನು ಸಾಕ್ಷ್ಯವಾಗಿ ಕೋರ್ಟ್​ಗೆ ಒದಗಿಸಿದ್ದಾರೆ.

ಅಂದಾಜು 2 ನಿಮಿಷ 42 ಸೆಕೆಂಡ್​ಗಳಷ್ಟು ದೀರ್ಘವಾಗಿರುವ 2019ರ ಏಪ್ರಿಲ್​ 20ರ ರಾತ್ರಿ 11 ಗಂಟೆಯದ್ದು ಎನ್ನಲಾದ ಸಿಸಿ ಕ್ಯಾಮರಾದ ದೃಶ್ಯದಲ್ಲಿ ನಿವೃತ್ತ ನ್ಯಾಯಮೂರ್ತಿ ರಾಮಮೋಹನ ರಾವ್​ ಸೊಸೆಯನ್ನು ಹಿಡಿದೆಳೆದು, ಸೋಫಾ ಒಂದರ ಮೇಲೆ ಬಲವಂತವಾಗಿ ಕೂರಿಸಲು ಯತ್ನಿಸುತ್ತಿದ್ದಾರೆ. ಇನ್ನೊಂದೆಡೆ ಅವರ ಪುತ್ರ ಸಿಂಧು ಮೇಲೆ ಹಲ್ಲೆ ಮಾಡುತ್ತಾರೆ. ಆಗ ಅಡ್ಡಬರುವ ರಾಮಮೋಹನ ರಾವ್​ ಅವರ ಪತ್ನಿ, ಸೊಸೆಯನ್ನು ಹೊಡೆಯದಂತೆ ಪುತ್ರನನ್ನು ತಡೆಯುತ್ತಾರೆ. ಆದರೆ, ಮನೆಯಿಂದ ಹೊರಟು ಹೋಗುವಂತೆ ಮನೆಯ ಮುಖ್ಯಬಾಗಿಲಿನತ್ತ ಬೆರಳು ಮಾಡಿ ತೋರಿಸುತ್ತಾರೆ.

ಹೀಗೆ ಸುಮಾರು ಹೊತ್ತು ಜಟಾಪಟಿ ನಡೆದು, ಸಿಂಧು ಹೊರಹೋಗಲು ಎದ್ದಾಗ ಮತ್ತೆ ಆಕೆಯನ್ನು ರಾಮಮೋಹನ ರಾವ್​ ನೆಲದ ಮೇಲೆ ಕೆಡವುತ್ತಾರೆ. ನಾಲ್ಕು ಮತ್ತು ಎರಡು ವರ್ಷ ವಯಸ್ಸಿನ ಮಕ್ಕಳು ತಾಯಿಗೆ ಏನೂ ಮಾಡದಂತೆ ತಡೆಯಲು ಬರುತ್ತವೆಯಾದರೂ, ಆ ಮಕ್ಕಳನ್ನು ಸಿಂಧು ಪತಿ ದೂರ ಕರೆದುಕೊಂಡು ಹೋಗುತ್ತಾರೆ. ಅಷ್ಟರಲ್ಲೇ ಮನೆಯೊಳಗೆ ಬರುವ ಮಹಿಳೆ ಸಿಂಧು ಸಹಾಯಕ್ಕೆ ಮುಂದಾಗಿ ಆಕೆಯನ್ನು ಮನೆಯಿಂದ ಹೊರಕರೆದೊಯ್ದು ರಕ್ಷಿಸುತ್ತಾರೆ.

ತಮ್ಮನ್ನು ಅತ್ತೆ, ಮಾವ ಹಾಗೂ ಪತಿ ಸೇರಿ ಹೊಡೆದಿದ್ದರಿಂದ ನನಗೆ ಮೈ ತುಂಬಾ ಗಾಯಗಳಾಗಿದ್ದವು. ಹೈದರಾಬಾದ್​ನ ಅಪೋಲೋ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾಗಿ ಸಿಂಧು ಶರ್ಮ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

 

 

 

 

 

 

 

 

 

 

Leave a Reply

Your email address will not be published. Required fields are marked *