64 ವರ್ಷದ ನಂತರ ಮಗಳು ತವರು ಮನೆಗೆ!

ಗುತ್ತಲ: ಅವಳು ಗುತ್ತಲ ಪಟ್ಟಣದ ಮಗಳು, 64 ವರ್ಷದಿಂದ ತವರು ಮನೆಗೆ ಬಾರದೆ ಇದ್ದಳು. ಇದೀಗ ತವರು ಮನೆಗೆ ಬರುವ ಕಾಲ ಕೂಡಿಬಂದಿದ್ದು, ಸೋಮವಾರ (ಡಿ. 17ರಂದು) ಆಗಮಿಸಿ 3 ದಿನ ಇಲ್ಲಿಯೇ ಇರುವಳು. ಮನೆ ಮಗಳ ಮೊದಲ ಆಗಮನದ ನಿರೀಕ್ಷೆಯಲ್ಲಿ ಇಡೀ ಪಟ್ಟಣದ ಜನ ಕಾತುರಗೊಂಡಿದ್ದಾರೆ.

ಹೌದು. ಚಿಕ್ಕ ಕುರವತ್ತಿ ಗ್ರಾಮದ ಗ್ರಾಮದೇವತೆಯ ತವರೂರು ಗುತ್ತಲ. 1954ರಲ್ಲಿ ಪಟ್ಟಣದ ಖ್ಯಾತ ಚಿತ್ರ ಕಲಾವಿದ ಹಾಗೂ ಶಿಲ್ಪಿಯಾದ ರುದ್ರಯ್ಯ ವೀರಭದ್ರಯ್ಯ ಭೂಸನೂರಮಠ ಅವರು ನಿರ್ವಿುಸಿದ್ದ ಗ್ರಾಮದೇವಿಯನ್ನು ಚಿಕ್ಕ ಕುರವತ್ತಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಈ ವಿಷಯ ಅನೇಕರಿಗೆ ತಿಳಿದಿರಲಿಲ್ಲ. ಆದರೆ, ಪಟ್ಟಣದ ಗ್ರಾಮದೇವಿಯ ತವರೂರು ಕೂರಗುಂದ ಗ್ರಾಮವಾಗಿದೆ. ಅದರಂತೆ ನಮ್ಮೂರಿನ ಮನೆ ಮಗಳು ಬೇರೊಂದು ಗ್ರಾಮದಲ್ಲಿನ ಗ್ರಾಮದೇವಿ ಇರಬಹುದು. ಮನೆ ಮಗಳನ್ನು ಕರೆತರಬೇಕು ಎಂದು ವಿಷಯ ಅನೇಕರಲ್ಲಿ ಮನೆ ಮಾಡಿತ್ತು. ಈ ವಿಚಾರವಾಗಿ ಹುಡುಕಲಾಗಿ ಕೊನೆಗೆ ಚಿಕ್ಕಕುರವತ್ತಿ ಗ್ರಾಮದಲ್ಲಿನ ದೇವಿಯು ಗುತ್ತಲದ ಮನೆ ಮಗಳು ಎಂದು ಮಾಹಿತಿ ಸಿಕ್ಕಿತ್ತು.

ಪಟ್ಟಣದ ಖ್ಯಾತ ಕಲಾವಿದ ದಿ. ರುದ್ರಯ್ಯ ವೀರಭದ್ರಯ್ಯ ಭೂಸನೂರಮಠ ಅವರಿಂದ ನಿರ್ವಣವಾದ ದೇವಿ ಎಂಬುದು ತಿಳಿದು ಗ್ರಾಮಸ್ಥರು ಸಂತಸಪಟ್ಟಿದ್ದರು. ಅಲ್ಲದೆ, ಇಷ್ಟು ವರ್ಷ ದೇವಿಯನ್ನು ತವರಿಗೆ ಕರೆತರದಿರುವುದು ಪ್ರಮಾದವಾಗಿದೆ. ಆದ್ದರಿಂದ ದೇವಿಯನ್ನು ಕರೆತಂದು ತವರುಮನೆ ಉಡುಗೊರೆಯೊಂದಿಗೆ ಸಂತಸದಿಂದ ಕಳುಹಿಸಬೇಕು ಎಂದು ನಿರ್ಧರಿಸಿದ್ದಾರೆ. ಅದರಂತೆ ದೇವಿ ಆಗಮನವಾಗುತ್ತಿದೆ.

ಅಲ್ಲದೆ, ದೇವಿಯ ಆಗಮನದಿಂದ ಪಟ್ಟಣದ ಎಲ್ಲರಿಗೆ ಒಳ್ಳೆಯದಾಗುವುದು. ಮಳೆ-ಬೆಳೆ ಸಮೃದ್ಧಿಯಾಗಲಿ ಎಂಬ ಆಶಾಭಾವನೆ ಮೂಡಿದೆ.

ಕಾರ್ಯಕ್ರಮ ವಿವರ: ಡಿ. 17ರಂದು ಪೂರ್ಣಕುಂಭಗಳೊಂದಿಗೆ ಮೆರವಣಿಗೆ ಮೂಲಕ ದೇವಿಯ ಪುರ ಪ್ರವೇಶ ನಡೆಯಲಿದೆ. ಡಿ. 18ರಂದು ವಿವಿಧ ಮಠಾಧೀಶರರ ಸಮ್ಮುಖದಲ್ಲಿ ಚಂಡಿ ಹೋಮ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು. 19ರಂದು ಸಮಸ್ತ ಸದ್ಭಕ್ತರಿಂದ ಹಣ್ಣುಕಾಯಿ ನೈವೇದ್ಯ ಮಾಡಿಸುವುದು. 20ರಂದು ಸಂಜೆ 4ಕ್ಕೆ ದೇವಿಯನ್ನು ಪುನಃ ಚಿಕ್ಕ ಕುರವತ್ತಿ ಗ್ರಾಮಕ್ಕೆ ಬೀಳ್ಕೊಡಲಾಗುವುದು.