ಮೈಸೂರು ದಸಾರದಲ್ಲಿ ಮಂಗಳಮುಖಿಯರಿಂದ ದೇವರ ಹಾಡು, ಸಖತ್​ ಡಾನ್ಸ್​

ಮೈಸೂರು: ಸಂಭ್ರಮದ ದಸರಾದಲ್ಲಿ ದಿನವೂ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದ್ದು, ನಾಡಿನ ಜನರ ಮನಸೂರೆಗೊಳ್ಳುತ್ತಿವೆ.
ಇಂದು ನಡೆದ ಮಹಿಳಾ ಮತ್ತು ಮಕ್ಕಳ ದಸರಾ ಉತ್ಸವದಲ್ಲಿ ವಿಶೇಷವಾಗಿ ಮಂಗಳಮುಖಿಯರು ಗಮನಸೆಳೆದರು. ಇದೇ ಮೊದಲಬಾರಿಗೆ ಮಂಗಳಮುಖಿಯರು ದಸಾರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರು. ಮೊದಲು ದೇವರ ಹಾಡು ಹಾಡುವ ಮೂಲಕ ಕಾರ್ಯಕ್ರಮ ಪ್ರಾರಂಭಿಸಿ, ವೇದಿಕೆ ಮೇಲೆ ನೃತ್ಯ ರೂಪಕ, ಡ್ಯಾನ್ಸ್​, ಫ್ಯಾಷನ್ ಶೋದಲ್ಲಿ ಪಾಲ್ಗೊಂಡರು.

ಬಾಳೆಹಣ್ಣು ತಿನ್ನುವ ಸ್ಪರ್ಧೆ
ಆಹಾರ ಮೇಳದಲ್ಲಿ 5-10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಪಚ್ಚ ಬಾಳೆಹಣ್ಣು ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. 2 ನಿಮಿಷದಲ್ಲಿ ನಾಲ್ಕು ಬಾಳೆಹಣ್ಣು ತಿಂದ ಪಿರಿಯಾಪಟ್ಟಣದ ಭರತ್​ ಪ್ರಥಮ ಸ್ಥಾನ ಪಡೆದರು. ಅದಾದ ಬಳಿಕ ಕೋರಿಕೆ ಮೇರೆಗೆ ವಯಸ್ಕರಿಗೂ ಸ್ಪರ್ಧೆ ಏರ್ಪಡಿಸಲಾಯಿತು. ಮೇಗಳಪುರ ನಿವಾಸಿ ಮಹದೇವಸ್ವಾಮಿ ಕ್ಷಣಾರ್ಧದಲ್ಲಿ 5 ಪಚ್ಚ ಬಾಳೆಹಣ್ಣು ತಿಂದು ಮೊದಲ ಸ್ಥಾನ ಪಡೆದರು.

ಅಡುಗೆ ಮಾಡಿದ ಅಜ್ಜಿಯರು
ಹಿರಿಯ ನಾಗರಿಕರಿಗಾಗಿ ಸಿರಿ ಧಾನ್ಯಗಳಿಂದ ಆಹಾರ ತಯಾರಿಕಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಮೈಸೂರಿನ ಸ್ಕೌಟ್ಸ್​ ಮತ್ತು ಗೈಡ್ಸ್​ ಮೈದಾನದಲ್ಲಿ ಒಟ್ಟು 8 ಜೋಡಿ ಅಜ್ಜಿಯರು ಸಿರಿಧಾನ್ಯಗಳ ಅಡುಗೆ ಮಾಡಿದರು.
ಇನ್ನು ಪುಸ್ತಕಮೇಳ, ಕವಿಗೋಷ್ಠಿ, ದಸರಾ ಕ್ರೀಡಾಕೂಟ, ಫಲಪುಷ್ಪ ಪ್ರದರ್ಶನಗಳು ಜನರನ್ನು ಆಕರ್ಷಿಸುತ್ತಿವೆ.