ಕಳೆಗಟ್ಟಿದ ದಸರಾ: ಓಪನ್ ಸ್ಟ್ರೀಟ್​ ಫೆಸ್ಟಿವಲ್​ನಲ್ಲಿ ಆಕರ್ಷಿಸಿದ ಸಖತ್​ ಡಾನ್ಸ್​

ಮೈಸೂರು: ವಿಶ್ವ ವಿಖ್ಯಾತ ದಸರಾ ಮಹೋತ್ಸವ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ಶನಿವಾರ ಓಪನ್ ಸ್ಟ್ರೀಟ್ ಫೆಸ್ಟಿವಲ್ ಸಂಭ್ರಮದಿಂದ ನೆರವೇರಿತು. ಉದ್ಘಾಟನೆಗೆ ವಿಳಂಬವಾದರೂ ಕಾರ್ಯಕ್ರಮದಲ್ಲಿ ಕಾಲೇಜು ಯುವತಿಯರು ಸಖತ್​ ನೃತ್ಯ ಮಾಡಿದರು. ಡ್ರಮ್​ ಬೀಟ್​ಗಳಿಗೆ ತಕ್ಕಂತೆ ತಾಳ ಬಡಿಯುತ್ತ ಸಂತೋಷದಿಂದ ಸ್ಟೆಪ್​ ಹಾಕಿದರು. ಹುಲಿಕುಣಿತ, ಗೊಂಬೆ ಕುಣಿತಗಳು ಮನಸೂರೆಗೊಂಡವು.

ಅದನ್ನು ನೋಡುತ್ತಿದ್ದವರೂ ಚಪ್ಪಾಳೆ ಹೊಡೆದು, ವಿಷಲ್​ ಹಾಕಿ ಹುರಿದುಂಬಿಸುತ್ತಿದ್ದ ದೃಶ್ಯ ಕಂಡುಬಂತು.

ಸಾಹಸ ಪ್ರದರ್ಶನ
ಏರ್​ ಡೆವಿಲ್​, ಆಕಾಶ ಗಂಗಾ ತಂಡಗಳಿಂದ ಸಾಹಸಪ್ರದರ್ಶನ ನಡೆಯಿತು. ಒಟ್ಟು ಒಂಭತ್ತು ಯೋಧರು ಸ್ಕೈಡೈವಿಂಗ್​ ನಡೆಸಿದರು. ಗಜಾನಂದ್​ ಯಾದವ್​ ತಂಡ 8,000 ಅಡಿ ಎತ್ತರದಿಂದ ಸ್ಕೈ ಡೈವಿಂಗ್ ನಡೆಸಿದರು.

ಮಹಿಳೆಯರಿಗೆ ಫ್ರಾಗ್ ರೇಸ್​
ರೈತ ದಸರಾ ಕ್ರೀಡಾಕೂಟದಲ್ಲಿ ಮಹಿಳೆಯರಿಗಾಗಿ ಫ್ರಾಗ್​ ರೇಸ್​( ಕಪ್ಪೆಯಂತೆ ಕುಪ್ಪಳಿಸುವ ಸ್ಪರ್ಧೆ) ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಏಳು ಮಹಿಳೆಯರು ಭಾಗವಹಿಸಿದ್ದರು. ನಂಜನಗೂಡಿನ ಮಂಜುಳಾ ಮಹೇಶ್​ ಪ್ರಥಮ ಸ್ಥಾನ ಪಡೆದರು. ಪುರುಷರಿಗಾಗಿ ಹಲವು ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ಟಾಂಗಾ ಸವಾರಿ
ದಂಪತಿಗಳಿಗಾಗಿ ವಿಶೇಷ ಪಾರಂಪರಿಕ ಟಾಂಗಾ ಸವಾರಿಯನ್ನು ಪುರಾತತ್ವ ಸಂಗ್ರಾಹಲಯ ಹಾಗೂ ಪರಂಪರೆ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿತ್ತು.

ಮೈಸೂರು ಶೈಲಿಯ ಸಾಂಪ್ರದಾಯಿಕ ಉಡುಗೆ ತೊಟ್ಟ ದಂಪತಿ 42 ಟಾಂಗಾಗಳಲ್ಲಿ ಸಿಟಿ ರೌಂಡ್ಸ್​ಗೆ ತೆರಳಿದರು. ಈ ಕಾರ್ಯಕ್ರಮವನ್ನು ಮಹಿಳೆಯರಿಗೆ ಬಾಗಿನ ಕೊಡುವ ಮೂಲಕ ಸಚಿವ ಸಾ.ರಾ.ಮಹೇಶ್​ ಉದ್ಘಾಟಿಸಿದರು.