ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಮೈಸೂರು: ಸಾವಿರ ಸಾವಿರ ಜನಸ್ತೋಮದ ನಡುವೆ ಗಾಂಭೀರ್ಯದಿಂದ ಸಾಗುವ ಗಜಪಡೆ. ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತ ತಾಯಿ ಚಾಮುಂಡೇಶ್ವರಿಯನ್ನು ನೋಡುತ್ತಿದ್ದಂತೆ ಧನ್ಯೋಷ್ಮಿ ಎಂಬ ಭಾವ. ಈ ಸಂಭ್ರಮ ಸಡಗರದ ಕ್ಷಣಗಳಿಗೆಲ್ಲ ಕ್ಷಣಗಣನೆ ಶುರುವಾಗಿದೆ.

ಹೌದು, ನವರಾತ್ರಿಯ ಅಂತಿಮ ದಿನವಾದ ಇಂದು ಸಾಂಸ್ಕೃತಿಕ ನಗರಿಯಲ್ಲಿ ಜನಸಾಗರವೇ ಹರಿದು ಬರಲಿದೆ. ಮೈಸೂರಿನಾದ್ಯಂತ ವಿಜಯದಶಮಿಯ ಸಂಭ್ರಮ ಗರಿಗೆದರಿದೆ. ಐತಿಹಾಸಿಕ ಜಂಬೂಸವಾರಿ ವೀಕ್ಷಣೆಗೆ ಲಕ್ಷಾಂತರ ಜನರು ಕಾತರರಾಗಿದ್ದಾರೆ. ಚಾಮುಂಡಿ ದೇವಿ ಆಸೀನಳಾಗಿರುವ ರತ್ನ ಖಚಿತ ಚಿನ್ನದ ಅಂಬಾರಿಯನ್ನು ಅರ್ಜುನ ಹೊತ್ತು ಸಾಗಲಿದ್ದು, ಜಂಬೂಸವಾರಿಗೆ ಸಕಲ ಸಿದ್ಧತೆ ನಡೆದಿದೆ.

ಜಂಬೂಸವಾರಿ ದಿನವಾದ ಇಂದು ಅರಮನೆಯಲ್ಲಿ ನಡೆಯುವ ಕಾರ್ಯಕ್ರಮಗಳು

 • ಬೆಳಗ್ಗೆ 8.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ ಆಗಮನ
 • ಬೆಳಗ್ಗೆ 9.25ರಿಂದ 9.35ರೊಳಗೆ ಉತ್ತರ ಪೂಜೆ
 • ಬೆಳಗ್ಗೆ 10 ಗಂಟೆ ಸುಮಾರಿಗೆ ವಜ್ರಮುಷ್ಠಿ ಕಾಳಗ
 • ಜಟ್ಟಿಗಳ ರಕ್ತ ಚಿಮ್ಮಿದ ಮೇಲೆ ವಿಜಯಯಾತ್ರೆ
 • ಬೆಳ್ಳಿರಥದಲ್ಲಿ ಯದುವೀರ್ ವಿಜಯಯಾತ್ರೆ
 • ವಿಜಯಯಾತ್ರೆ ಬಳಿಕ ಬನ್ನಿ ಮರಕ್ಕೆ ಮಹಾರಾಜ ಪೂಜೆ
 • ಜಂಬೂಸವಾರಿಗೆ ತೆರಳಲಿರುವ ದೇವಿಯ ಉತ್ಸವಮೂರ್ತಿ
 • ನಂದಿಧ್ವಜ ಪೂಜೆ ಮೂಲಕ ಜಂಬೂ ಸವಾರಿಗೆ ಚಾಲನೆ
 • ಮಧ್ಯಾಹ್ನ 2:30 – 3:16ರೊಳಗೆ ನಂದಿಧ್ವಜಕ್ಕೆ ಪೂಜೆ
 • ನಂದಿಧ್ವಜ ಪೂಜೆ ಬಳಿಕ ಜಂಬೂಸವಾರಿ ಆರಂಭ
 • 7ನೇ ಬಾರಿ ಚಿನ್ನದ ಅಂಬಾರಿ ಹೊರಲಿರುವ ಅರ್ಜುನ
 • 13 ಬಾರಿ ಅಂಬಾರಿ ಹೊತ್ತ ಬಲರಾಮಗೆ ನಿಶಾನೆ ಗೌರವ
 • ಜಂಬೂ ಸವಾರಿ ಹಿಂದೆ ಸ್ತಬ್ಧ ಚಿತ್ರಗಳ ಮೆರವಣಿಗೆ
 • ಸಂಜೆ 7 ಗಂಟೆಗೆ ಪಂಜಿನ ಕವಾಯತು, ಸಾಹಸ ಪ್ರದರ್ಶನ

ಜಂಬೂಸವಾರಿ ಸಾಗುವ ಮಾರ್ಗ
# ಅರಮನೆ ಆವರಣ
# ಆಲ್ಬರ್ಟ್​​ ವಿಕ್ಟರ್​​ ರಸ್ತೆ
# ನ್ಯೂ ಸಯ್ಯಾಜಿರಾವ್​ ರಸ್ತೆ
# ಬನ್ನಿಮಂಟಪ

ಅರಮನೆ ಆವರಣದಿಂದ ಹೊರಡಲಿರುವ ಜಂಬೂ ಸವಾರಿ ಆಲ್ಬರ್ಟ್ ವಿಕ್ಟರ್ ರಸ್ತೆ, ನ್ಯೂ ಸಯ್ಯಾಜಿರಾವ್ ರಸ್ತೆ ಮಾರ್ಗವಾಗಿ ಸಂಚರಿಸಿ ಬನ್ನಿಮಂಟಪದಲ್ಲಿ ಅಂತ್ಯಗೊಳ್ಳಲಿದೆ. ವಿಜಯದಶಮಿ ಮೆರವಣಿಗೆ ಮುಗಿಯುತ್ತಿದ್ದಂತೆಯೇ ಬನ್ನಿಮಂಟಪದಲ್ಲಿ ವರ್ಣಮಯ ಲೋಕ ಸೃಷ್ಟಿಯಾಗಲಿದೆ. ರಾತ್ರಿ 7ರಿಂದ 10.30ರವರಗೆ ನಡೆಯಲಿರುವ ಪಂಜಿನ ಕವಾಯತು ಕಾರ್ಯಕ್ರಮದಲ್ಲಿ ಪೊಲೀಸ್ ಪಡೆಗಳ ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮ, ಸಾಹಸ ಪ್ರದರ್ಶನ ಸೇರಿದಂತೆ ಕಲರ್​ಫುಲ್ ಕಾರ್ಯಕ್ರಮಗಳು ಇರಲಿವೆ.

ಬಿಗಿ ಭದ್ರತೆ
ಜಂಬೂ ಸವಾರಿ ನೋಡಲು ಲಕ್ಷಾಂತರ ಪ್ರವಾಸಿಗರು ಸೇರಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆ, ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮೈಸೂರು ಪೊಲೀಸರು ಸನ್ನದ್ಧರಾಗಿದ್ದಾರೆ. ದಸರಾ ಮೆರವಣಿಗೆಗಾಗಿ ಬರೋಬ್ಬರಿ 5000ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಕಮಾಂಡ್ ಸೆಂಟರ್ ವಾಹನ ಬಳಕೆ ಸಹ ಮಾಡಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)