More

    ದಸರಾ ಆಹಾರ ಮೇಳ: ಎರಡು ಕಡೆಯಲ್ಲ, ಒಂದೆ ಕಡೆ ಮಾತ್ರ!

    ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು


    ಒಂದೇ ಸೂರಿನಡಿ ತರಹೇವಾರಿ ಖಾದ್ಯಗಳ ರುಚಿಯನ್ನು ಸವಿಯುವ ಅವಕಾಶ ಕಲ್ಪಿಸಿಕೊಡುವ ದಸರಾ ಆಹಾರ ಮೇಳವನ್ನು ಈ ಸಲ ಒಂದು ಕಡೆ ಮಾತ್ರ ಆಯೋಜಿಸಲಾಗುತ್ತಿದೆ.


    ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಅ.15ರಿಂದ 22ರ ವರೆಗೆ ಆಹಾರ ಮೇಳ ನಡೆಯಲಿದೆ. ಲಲಿತಮಹಲ್ ಪ್ಯಾಲೇಸ್ ಬಳಿಯ ಮುಡಾ ಮೈದಾನದಲ್ಲಿ ಈ ಬಾರಿ ಆಹಾರ ಮೇಳ ಆಯೋಜನೆಯನ್ನು ಕೈಬಿಡಲಾಗಿದೆ. ಇದರಿಂದಾಗಿ ನರಸಿಂಹರಾಜ ಕ್ಷೇತ್ರ, ಸಿದ್ಧಾರ್ಥನಗರ, ಆಲನಹಳ್ಳಿ ಸೇರಿದಂತೆ ಮೈಸೂರಿನ ಪೂರ್ವಭಾಗದ ಜನರಿಗೆ ನಿರಾಸೆಯಾಗಿದೆ.

    ಈ ಹಿಂದೆ ಎರಡು ಕಡೆ ಆಹಾರ ಮೇಳ ಆಯೋಜನೆ:


    ಡಿ.ರಂದೀಪ್ ಅವರು ಜಿಲ್ಲಾಧಿಕಾರಿ ಆಗಿದ್ದಾಗ ಎರಡು ಕಡೆ ಆಹಾರ ಮೇಳ ಆಯೋಜನೆ ಪರಂಪರೆಯನ್ನು 2017ರಲ್ಲಿ ಶುರು ಮಾಡಿದ್ದರು. ಮೈಸೂರಿನ ಪೂರ್ವಭಾಗದ ಜನರು ದಕ್ಷಿಣ ಭಾಗದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದ ಆಹಾರ ಮೇಳಕ್ಕೆ ಬರುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿತ್ತು. ಈ ಮೂಲಕ ಜನರು, ವಾಹನಗಳ ದಟ್ಟಣೆ ಕಡಿಮೆ ಮಾಡಲು ಪ್ರಯತ್ನಿಸಲಾಗಿತ್ತು. ಈ ಪ್ರಯೋಗ ತಕ್ಕಮಟ್ಟಿಗೆ ಯಶಸ್ವಿ ಆಗಿತ್ತು. ಆದರೀಗ ಹೊಸ ಪದ್ಧತಿಗೆ ತಿಲಾಂಜಲಿ ಹೇಳಲಾಗಿದೆ. ಎರಡು ಕಡೆ ಬದಲಿಗೆ ಒಂದೇ ಕಡೆ ಆಹಾರ ಉತ್ಸವ ಹಮ್ಮಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.

    ಅತಿಯಾದ ಒತ್ತಡ ಸೃಷ್ಟಿ


    ಈ ತೀರ್ಮಾನದಿಂದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುವ ಮೇಳದ ಮೇಲೆ ಅತಿಯಾದ ಒತ್ತಡ ಸೃಷ್ಟಿಯಾಗಲಿದೆ. ಜನದಟ್ಟಣೆ ಹೆಚ್ಚಾಗಲಿದೆ. ಸಂಜೆ 5ರಿಂದ ರಾತ್ರಿ 10ರ ವರೆಗೆ ಜನಸಾಗರವೇ ಇಲ್ಲಿ ಜಮಾವಣೆಗೊಳ್ಳಲಿದೆ. ನಿಂತುಕೊಳ್ಳಲು ಜಾಗ ದೊರೆಯುವುದಿಲ್ಲ. ಜನಪ್ರವಾಹವನ್ನು ನಿಯಂತ್ರಿಸಲು ಪೊಲೀಸರು, ಸ್ವಯಂಸೇವಕರು ಹರಸಾಹಸ ಪಡಬೇಕಾಗುತ್ತದೆ. ವಾಹನಗಳಿಗೆ ಪಾರ್ಕಿಂಗ್ ಸಮಸ್ಯೆ, ಟ್ರಾಫಿಕ್ ಜಾಮ್ ಉಂಟಾಗಲಿದ್ದು, ಮೇಳಕ್ಕೆ ಬರುವ ಜನರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿಕೊಡಲು ಕಷ್ಟಕರವಾಗಲಿದೆ. ಅನೈರ್ಮಲ್ಯ ತಾಂಡವವಾಡುತ್ತದೆ. ಈ ರೀತಿಯ ಅವಾಂತರ ಹಿಂದೆ ಆಹಾರ ಮೇಳದಲ್ಲಿ ನಡೆದಿತ್ತು. ಅದು ಈ ಸಲ ಪುನರಾವರ್ತನೆ ಆಗುವುದು ನಿಶ್ಚಿತವಾಗಿದೆ.


    ನಿಷೇಧಿತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕವುದೂ ಕಷ್ಟಕರವಾಗಲಿದೆ. ಆಹಾರದ ಗುಣಮಟ್ಟ ಕಾಪಾಡಲು ಸಾಧ್ಯವಾಗುವುದಿಲ್ಲ. ಜತೆಗೆ, ಬೇಡಿಕೆ ಹೆಚ್ಚುವುದರಿಂದ ಆಹಾರ ಪದಾರ್ಥಗಳ ಬೆಲೆ ದುಬಾರಿ ಆಗಲಿದ್ದು, ಇದರಿಂದ ಗ್ರಾಹಕರಿಗೆ ಹೊರೆ ಆಗಲಿದೆ. ಈ ಎಲ್ಲ ಸಂಗತಿಗಳನ್ನು ಮನಗಂಡು ಜಿಲ್ಲಾಡಳಿತ ಈ ತೀರ್ಮಾನದ ಮರು ಪರಿಶೀಲನೆ ಮಾಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಆರೋಗ್ಯ ಸ್ನೇಹಿ ಖಾದ್ಯ:


    ಈ ಸಲವೂ ವೈವಿಧ್ಯಮಯ ಆಹಾರ ಪದಾರ್ಥದೊಂದಿಗೆ ಆರೋಗ್ಯ ಸ್ನೇಹಿ ಖಾದ್ಯಕ್ಕೆ ಆದ್ಯತೆ ನೀಡಲಾಗಿದೆ. ಸಿರಿಧಾನ್ಯಗಳ ಅಡುಗೆ ರುಚಿಕರ ಪರಿಮಳ ಹೊರಸೂಸಲಿದೆ.
    ಸಮಕಾಲೀನ, ಆಧುನಿಕ ಆಹಾರ ಅಭ್ಯಾಸಗಳಿಂದ ಜನರ ಮಾನಸಿಕ, ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಸಹಜ, ನೈಸರ್ಗಿಕ, ಸಾವಯವ ಕೃಷಿಯಲ್ಲಿ ಬೆಳೆದ ಆಹಾರ ಧಾನ್ಯಗಳು, ಹಣ್ಣು, ತರಕಾರಿ, ಕಾಯಿ ಪಲ್ಯಗಳಿಂದ ತಯಾರಿಸಿದ ಅಡುಗೆಗಳಿಗೆ ಒತ್ತು ನೀಡಲಾಗುತ್ತಿದೆ.

    ಸಿರಿಧಾನ್ಯಗಳಿಂದ ತಯಾರಿಸಿದ ಅಡುಗೆಗೂ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ದೇಸಿ ಮತ್ತು ಖಂಡಾಂತರ ಆಹಾರ ಪದ್ಧತಿಯ ಜತೆಗೆ ಪ್ರಾದೇಶಿಕ, ಹೊರ ರಾಜ್ಯಗಳ ವೈವಿಧ್ಯದ ಊಟೋಪಚಾರ ದೊರೆಯಲಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಜಂಟಿ ನಿರ್ದೇಶಕಿ, ಆಹಾರ ಮೇಳ ಉಪಸಮಿತಿ ಕಾರ್ಯಾಧ್ಯಕ್ಷೆ ಕುಮುದಾ ಶರತ್ ತಿಳಿಸಿದ್ದಾರೆ.


    ಸಿರಿಧಾನ್ಯ ಬೆಳೆಗಾರರು, ಸಹಜ, ನೈಸರ್ಗಿಕ ಕೃಷಿಕರು, ಸಾವಯವ ಕೃಷಿಕರು, ಸಿರಿಧಾನ್ಯ ಬೆಳೆಗಾರರ ಸಂಘಗಳು ಆಹಾರ ಮೇಳಗಳಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ. ಸಿರಿಧಾನ್ಯ ಅಡುಗೆ ತಯಾರಿಸಲು, ಸಹಜ, ಸಾವಯವ ಕೃಷಿಯಲ್ಲಿ ಬೆಳೆದ ಹಣ್ಣು, ತರಕಾರಿ ಮಾರಾಟಗಾರರು ಮೇಳಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


    ಸಸ್ಯಾಹಾರ, ಮಾಂಸಾಹಾರ ಖಾದ್ಯ ಲಭ್ಯ


    ದಕ್ಷಿಣ ಕರ್ನಾಟಕ, ಉತ್ತರ ಕರ್ನಾಟಕ, ಟಿಬೆಟಿಯನ್ ಆಹಾರ ಪದ್ಧತಿ, ಹೊರ ರಾಜ್ಯದ ಆಹಾರ ಪದ್ಧತಿಯಡಿ ಕಾಶ್ಮೀರಿ, ಪಂಜಾಬಿ, ರಾಜಸ್ಥಾನಿ, ಈಶಾನ್ಯ ಭಾರತ ಆಹಾರ ಪದ್ಧತಿ, ಆಂಧ್ರ, ಕೇರಳ, ತಮಿಳುನಾಡು, ಮರಾಠಿ ಶೈಲಿಯಲ್ಲಿ ಸಸ್ಯಾಹಾರ, ಮಾಂಸಾಹಾರದ ಖಾದ್ಯಗಳು ಸಿಗಲಿದ್ದು, ಗ್ರಾಹಕರು ಇವುಗಳ ರುಚಿ ಸವಿಯಬಹುದಾಗಿದೆ.


    ವಿದೇಶಿ ಆಹಾರದ ಘಮಲು:


    ಚೈನೀಸ್, ಇಟಾಲಿಯನ್, ಫ್ರೆಂಚ್, ಆಫ್ರಿಕನ್ ಶೈಲಿಯ ಆಹಾರವನ್ನೂ ಆಸ್ವಾದಿಸಬಹುದಾಗಿದೆ. ಈ ಪದ್ಧತಿಯಡಿ ಆಹಾರ ತಯಾರಿಸುವ ಅಡುಗೆಗಳು, ಸಿರಿಧಾನ್ಯ, ಸಹಜ, ಸಾವಯವ ಧಾನ್ಯಗಳು, ತರಕಾರಿಗಳಲ್ಲಿ ಅಡುಗೆಗಳನ್ನು ಮಾಡುವ ವ್ಯಕ್ತಿಗಳು, ಗೃಹಿಣಿಯರು, ಹೋಟೆಲ್‌ಗಳು, ಸಂಘ-ಸಂಸ್ಥೆಗಳು, ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಆಹ್ವಾನ ನೀಡಲಾಗಿದೆ.


    ವಿಶೇಷ ರುಚಿ:


    ಪಾರಂಪರಿಕವಾಗಿ ವಿಶೇಷ ಆಹಾರ ತಯಾರಿಸುವವರು, ವಿಶೇಷ ಅಥವಾ ಹೊಸ ತರಹದ ರುಚಿಯನ್ನು ಹೊಂದಿರುವ ಆಹಾರ ತಯಾರಕರೂ ಭಾಗವಹಿಸಿ ಖಾದ್ಯವನ್ನು ಸಾರ್ವಜನಿಕರಿಗೆ ಉಣಬಡಿಸಬಹುದು. ಇವರು ತಯಾರಿಸುವ ಖಾದ್ಯ ಜನರನ್ನು ಆಕರ್ಷಿಸುವ ಅವಕಾಶ ಕಲ್ಪಿಸಿಕೊಡಲಾಗಿದೆ.

    ಆನ್‌ಲೈನ್ ಅರ್ಜಿಗೆ ಕೊಕ್


    ಆಹಾರ ಮೇಳದಲ್ಲಿ ಮಳಿಗೆಗಳನ್ನು ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪದ್ಧತಿಯನ್ನು ಕೈಬಿಡಲಾಗಿದೆ. ಈ ಪದ್ಧತಿಗೆ ಸಣ್ಣ ವ್ಯಾಪಾರಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಆಹಾರ ಮೇಳ ಉಪಸಮಿತಿ ಮಣಿದಿದೆ. ಪ್ರತಿ ವರ್ಷದಂತೆ ಆಫ್‌ಲೈನ್ ಮೂಲಕವೇ ಅರ್ಜಿ ಆಹ್ವಾನಿಸಲಾಗುತ್ತಿದೆ. ಸಿದ್ಧಾರ್ಥನಗರದ ಹೊಸ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ 2ನೇ ಮಹಡಿಯ ಕೊಠಡಿ ಸಂಖ್ಯೆ 227ರಲ್ಲಿ ಅರ್ಜಿಗಳನ್ನು ಪಡೆದು, ಭರ್ತಿ ಮಾಡಿ ಅ.9ರ ಒಳಗೆ ಸಲ್ಲಿಸಬೇಕಾಗಿದೆ. ಮಾಹಿತಿಗಾಗಿ 9448343509, 9902248619, 0821-2422107ಸಂಪರ್ಕಿಸಬಹುದು.

    ಈ ಸಲ ಒಂದು ಕಡೆ ಮಾತ್ರ ಆಹಾರ ಮೇಳ ಆಯೋಜನೆಗೆ ತೀರ್ಮಾನ ಮಾಡಲಾಗಿದೆ. ಲಲಿತಮಹಲ್ ಪ್ಯಾಲೇಸ್ ಬಳಿಯ ಮುಡಾ ಮೈದಾನದಲ್ಲಿ ಈ ಬಾರಿ ಆಹಾರ ಮೇಳ ಆಯೋಜಿಸುತ್ತಿಲ್ಲ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಮಾತ್ರ ಮೇಳ ನಡೆಯಲಿದೆ.
    ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts