ಮೈಸೂರಿನಲ್ಲಿ ಸಾಹಸ ಕ್ರೀಡಾ ಚಟುವಟಿಕೆಗಳ ಪುಳಕ

ದಸರಾ ಮಹೋತ್ಸವಕ್ಕೆ ಇನ್ನು ಎರಡೇ ದಿನ ಬಾಕಿ

ಮೈಸೂರು: ಪ್ರವಾಸಿಗರನ್ನು ಚುಂಬಕ ಶಕ್ತಿಯಂತೆ ಸೆಳೆಯುವ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನು ಎರಡು ದಿನ ಬಾಕಿ ಇದ್ದು, ಇದಕ್ಕೆ ಪೂರಕವಾಗಿ ಭಾನುವಾರ ಸಾಹಸ ಕ್ರೀಡಾ ಚಟುವಟಿಕೆಗಳು ನೋಡುಗರನ್ನು ರೋಮಾಂಚನಗೊಳಿಸಿದವು.

ಧೂಳೆಬ್ಬಿಸುತ್ತಿರುವ ರೇಸಿಂಗ್ ಕಾರ್​ಗಳ ಮೇಳ ಆದ ‘ಗ್ರಾವೆಲ್ ಫೆಸ್ಟ್’ ಮತ್ತು ಈಜು, ಸೈಕ್ಲಿಂಗ್, ಓಟ ಒಳಗೊಂಡ ‘ಟ್ರಯಥ್ಲಾನ್’ ಗಮನ ಸೆಳೆದವು.

ಲಲಿತ ಮಹಲ್ ಹೆಲಿಪ್ಯಾಡ್ ಮೈದಾನದಲ್ಲಿ ನಡೆದ ಮನಮೋಹಕ ಗ್ರಾವೆಲ್ ಫೆಸ್ಟ್ ಕಾರ್ ರೇಸ್ ನೋಡುಗರನ್ನು ನಿಬ್ಬೆರಗಾಗಿಸಿತು. ದಸರಾ ಉತ್ಸವದಲ್ಲಿ ಇದನ್ನು ಮೊದಲ ಬಾರಿಗೆ ಪರಿಚಯಿಸಲಾಗಿದೆ. ರೇಸ್ ನೋಡಿ ಜನ ಖುಷಿಪಟ್ಟರು. ವಿಭಿನ್ನ ಸಿಸಿ ಕಾರ್​ಗಳ 8 ವಿಭಾಗದಲ್ಲಿ 168 ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ರೇಸಿಂಗ್ ಕಾರ್​ಗಳು, ಮೈ ನವಿರೇಳಿಸಿದ ಚಾಲಕರ ಸಾಹಸ, 1.8 ಕಿ.ಮೀ. ಅಂತರದ ಟ್ರ್ಯಾಕ್​ನಲ್ಲಿ ನಡೆದ ಕಾರ್​ಗಳ ರೇಸ್ ಆರ್ಭಟ ನೆರೆದವರನ್ನು ಮೈ ಜುಮ್ಮೆನಿಸಿತು.

ಪ್ರಥಮ ಬಾರಿಗೆ ಟ್ರಯಥ್ಲಾನ್ ಕೂಡ ನಡೆಯಿತು. ಸರಸ್ವತಿಪುರಂ ಈಜುಕೊಳ ಸಮೀಪ ಟ್ರಯಥ್ಲಾನ್​ಗೆ ಚಾಲನೆ ದೊರೆಯಿತು. 400 ಮೀ. ಈಜು, 10 ಕಿ.ಮೀ. ಸೈಕ್ಲಿಂಗ್, 2.5 ಕಿ.ಮೀ. ಓಟ ಒಳಗೊಂಡ ಸೂಪರ್ ಸ್ಪ್ರಿಂಟ್ ವಿಭಾಗ ಮತ್ತು 750 ಮೀ. ಈಜು, 20 ಕಿ.ಮೀ. ಸೈಕ್ಲಿಂಗ್, 5 ಕಿ.ಮೀ. ಓಟ ಒಳಗೊಂಡ ಸ್ಪ್ರಿಂಟ್ ವಿಭಾಗದಲ್ಲಿ ನಡೆದ ಟ್ರಯಥ್ಲಾನ್​ನಲ್ಲಿ ಒಟ್ಟು 98 ಸ್ಪರ್ಧಿಗಳು ಭಾಗಿಯಾಗಿದ್ದರು. ಶಾಲಾ ಮಕ್ಕಳಿಂದ ವಯೋವೃದ್ಧರು ಭಾಗಿಯಾಗಿ ಸಂಭ್ರಮಿಸಿದರು.

ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಆಯೋಜನೆ ಮಾಡಿರುವ ಹಾಪ್ ಆನ್, ಹಾಪ್ ಆಫ್ ಮತ್ತು ಓಪನ್ ಬಸ್​ಗೂ ಚಾಲನೆ ದೊರೆಯಿತು. ಒಂದೇ ಬಸ್​ನಲ್ಲಿ ಮೈಸೂರಿನ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ಈ ಮೂಲಕ ವ್ಯವಸ್ಥೆ ಮಾಡಲಾಗಿದೆ. ಓಪನ್​ಬಸ್ ಕೂಡ ಸಂಜೆ ವೇಳೆ ನಗರ ಪ್ರದರ್ಶನ ಮಾಡುತ್ತದೆ. ಒಬ್ಬರಿಗೆ 150 ರೂ. ದರ ನಿಗದಿ ಮಾಡಲಾಗಿದೆ. ಇಂದು ಎಲ್ಲ ಸಾರ್ವಜನಿಕರಿಗೆ ಉಚಿತ ಪ್ರಯಾಣ ಸೇವೆ ಕಲ್ಪಿಸಲಾಯಿತು. ಈ ಸೇವೆಯನ್ನು ಮೈಸೂರಿಗೆ ಶಾಶ್ವತ ಯೋಜನೆ ಮಾಡುವ ಯೋಚನೆಯೂ ಇದೆ.

ದಸರಾ ಗಜಪಡೆಗೆ ಅಂತಿಮ ಸುತ್ತಿನ ಕುಶಾಲತೋಪು ಸಿಡಿಸುವ ತಾಲೀಮು ಕೂಡ ಅರಮನೆಯ ಕೋಟೆ ಮಾರಮ್ಮನ ದೇಗುಲದ ಬಳಿ ಜರುಗಿತು. ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿ 21 ಬಾರಿ ಕುಶಾಲತೋಪು ಸಿಡಿಸಿದರು. ಯಾವ ಆನೆಯೂ ಬೆದರಿಲ್ಲ. ಅಶ್ವಾರೋಹಿ ದಳದ ಕುದುರೆಗಳೂ ಜಗ್ಗಲಿಲ್ಲ. ಜಂಬೂ ಸವಾರಿ ಆರಂಭಕ್ಕೂ ಮುನ್ನ ಫಿರಂಗಿ ಗಾಡಿಗಳನ್ನು ಬಳಸಿ 21 ಸುತ್ತು ಕುಶಾಲತೋಪು ಸಿಡಿಸಲಾಗುತ್ತದೆ.

ಪ್ರಗತಿಪರ ಒಕ್ಕೂಟಗಳಿಂದ ಮಹಿಷ ದಸರಾ ಕೂಡ ಪರ್ಯಾಯವಾಗಿ ನಡೆಯಿತು. ಪುರಭವನದಿಂದ ಆಕರ್ಷಕ ಸಾರೋಟಿನಲ್ಲಿ ಮಹಿಷನ ಭಾವಚಿತ್ರ ಮೆರವಣಿಗೆ ಚಾಮುಂಡಿಬೆಟ್ಟದವರೆಗೆ ನಡೆಯಿತು. ತಮಟೆ, ಡೊಳ್ಳು ಕುಣಿತ, ಪೂಜಾ ಕುಣಿತ, ನಾದಸ್ವರ ಸೇರಿದಂತೆ ಹಲವು ಕಲಾತಂಡಗಳ ಮೆರುಗು ನೀಡಿದವು.