ಅನ್ನದಾತರೇ ದಯಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ: ಎಚ್​ಡಿಕೆ

ಮೈಸೂರು: ಅನ್ನದಾತರೇ ದಯಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಡಿ, ನಿಮ್ಮ ರಕ್ಷಣೆ ನಮ್ಮ ಜವಾಬ್ದಾರಿ. ನಮ್ಮ ಸರ್ಕಾರವನ್ನು ನಂಬಿ. ನಿಮ್ಮ ಕುಟುಂಬವನ್ನು ಅನಾಥರನ್ನಾಗಿ ಮಾಡಬೇಡಿ ಎಂದು ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ರೈತರಲ್ಲಿ ಮನವಿ ಮಾಡಿದ್ದಾರೆ.

ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಬ್ಯಾಂಕ್​ನವರು ನೋಟಿಸ್ ಕೊಟ್ಟಿದ್ದಾರೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ಕೆಲಸ ಮಾಡಬೇಡಿ. ಪ್ರತಿಯೊಂದು ಕುಟುಂಬವನ್ನು ಉಳಿಸಲು ಇರುವ ಸರ್ಕಾರ ಇದು. ಪ್ರತಿ ಕುಟುಂಬವೂ ನೆಮ್ಮದಿಯಿಂದ ಬದುಕುವಂತೆ ಮಾಡುತ್ತೇವೆ. ಇದಕ್ಕಾಗಿ ಹಲವು ಯೋಜನೆಗಳನ್ನು ತರುತ್ತಿದ್ದೇವೆ. ನಿಮ್ಮಲ್ಲಿ ಕೈಮುಗಿದು ಕೇಳಿಕೊಳ್ಳುತ್ತಿದ್ದೇನೆ ಎಂದರು.

ನೆಮ್ಮದಿಯಿಂದ ಸಂತೋಷದಿಂದ ರಾಜ್ಯ ನಡೆಸುತ್ತಿಲ್ಲ. ನಾನು ಮೂಲ ರಾಜಕಾರಣಿಯಲ್ಲ. ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಿರುವೆ. ನಾನು ರಾಜ್ಯದ ಜನರ ಕೆಲಸ ಮಾಡಲು ಬಂದಿರುವೆ. ನಾಡನ್ನು ಕಟ್ಟಲು ರಾಜ್ಯದ ಜನತೆಯ ಸಹಕಾರ ಬೇಕಿದೆ. ದಯಮಾಡಿ ಅವಕಾಶ ಮಾಡಿಕೊಡಿ. ನೆಮ್ಮದಿಯ ಬದುಕು ಕಟ್ಟಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು.

ಚಾಮುಂಡೇಶ್ವರಿ ತಾಯಿಗೆ ಅಗ್ರಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಿರುವುದು ನಮ್ಮ ಭಾಗ್ಯ. ಯಾವುದೇ ಪ್ರಚಾರಕ್ಕೆ ಒಳಗಾಗದೆ ಕೆಲಸ ಮಾಡುತ್ತಿರುವ ಸುಧಾ ಮೂರ್ತಿ ಈ ನಾಡಿನಲ್ಲಿ ನಾನು ನೋಡಿದಂತ ಅಪರೂಪದ ಮಹಿಳೆ ಎಂದರು. (ದಿಗ್ವಿಜಯ ನ್ಯೂಸ್​)